ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣ: ‘ಚಿಲುಮೆ’ ಸಂಸ್ಥೆಯ ಇಂಜಿನಿಯರ್ ವಶಕ್ಕೆ

ಬೆಂಗಳೂರು, ನ. 20: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಗುರುತಿಸಿಕೊಂಡಿದ್ದ ಟೆಕ್ಕಿಯೊರ್ವನನ್ನು ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ.
ಸಂಜೀವ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ‘ಚಿಲುಮೆ’ ಸಂಸ್ಥೆ ಮಾಲಕತ್ವದಲ್ಲಿ ಹೊರತಂದಿದ್ದ ಆ್ಯಪ್‍ವೊಂದನ್ನು ಈತನೇ ನಿರ್ವಹಣೆ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.
ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೂಚನೆ ಮೇರೆಗೆ ಸಂಜೀವ್ ಶೆಟ್ಟಿ ಆ್ಯಪ್ ಸಿದ್ಧಪಡಿಸಿದ್ದರು. ಇನ್ನೂ, ಇದು ಯಾವ ಉದ್ದೇಶಕ್ಕೆ ಸಿದ್ಧಪಡಿಸಲಾಗಿತ್ತು ಎಂದು ತಿಳಿದು ಬಂದಿಲ್ಲ. ಆ್ಯಪ್ ಮುಖಾಂತರ ಇದುವರೆಗೂ ಎಷ್ಟು ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿತ್ತು ಎಂಬ ಹಲವು ತಾಂತ್ರಿಕ ವಿಚಾರಗಳ ಬಗ್ಗೆ ಆರೋಪಿಯಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಬಂಧಿತರ ಸಂಖ್ಯೆ ನಾಲ್ಕಕ್ಕೇರಿಕೆ: ‘ಚಿಲುಮೆ’ ಸಂಸ್ಥೆಯ ನಿರ್ದೇಶಕ, ಪ್ರಮುಖ ಕಿಂಗ್‍ಪಿನ್ ಎನ್ನಲಾದ ಕೆಂಪೇಗೌಡ ಎಂಬಾತನನ್ನು ಬಂಧಿಸಿದ್ದಾರೆ. ಈ ಮೂಲಕ ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇ ಏರಿದೆ.
ರವಿಕುಮಾರ್ ಸಹೋದರನಾಗಿರುವ ಕೆಂಪೇಗೌಡ, ಸಂಸ್ಥೆಯ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದ. ಜತೆಗೆ ಅಕ್ರಮದಲ್ಲಿಯೂ ಪ್ರಮುಖ ಪಾತ್ರ ನಿಭಾಯಿಸಿದ್ದಾನೆ. ಆತ ಅಕ್ರಮ ಎಸಗಿರುವ ಸಂಬಂಧ ಪ್ರಾಥಮಿಕ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಂಧಿಸಿದ್ದು ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಈ ಪ್ರಕರಣ ಸಂಬಂಧ 15ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಇಂದು(ಸೋಮವಾರ) ಬಿಬಿಎಂಪಿ ಅಧಿಕಾರಿಗಳನ್ನೂ ವಿಚಾರಣೆ ಮಾಡುತ್ತೇವೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಕೆಂಪೇಗೌಡ ವಿಚಾರಣೆ ವೇಳೆ ಹಣವನ್ನು ಬೇರೆ ರೀತಿಯಾಗಿ ಬಳಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಪ್ರಮುಖ ಆರೋಪಿಗಾಗಿ ರವಿಕುಮಾರ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ’
-ಶ್ರೀನಿವಾಸ್ ಪ್ರಸಾದ್, ಡಿಸಿಪಿ, ಕೇಂದ್ರ ವಿಭಾಗ