ನ್ಯೂಯಾರ್ಕ್‌ಗೆ ಅಪ್ಪಳಿಸಿದ ಬೃಹತ್ ಚಂಡಮಾರುತ

ನ್ಯೂಯಾರ್ಕ್, ನ.20: ಅಮೆರಿಕದ ಪಶ್ಚಿಮ ನ್ಯೂಯಾರ್ಕ್ ಪ್ರಾಂತಕ್ಕೆ ಬೃಹತ್ ಚಂಡಮಾರುತ ಅಪ್ಪಳಿಸಿದ್ದು ಕೆಲವೆಡೆ 6 ಅಡಿಗಳಷ್ಟು ಹಿಮಪಾತವಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಚಂಡಮಾರುತದಿಂದಾಗಿ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ವಿಮಾನಗಳ ಸಂಚಾರವನ್ನೂ ಭಾಗಶಃ ರದ್ದುಗೊಳಿಸಲಾಗಿದೆ.
1945 ಮತ್ತು 2014ರಲ್ಲಿ ಚಂಡಮಾರುತದ ಸಮಯದಲ್ಲಿ ಉಂಟಾದ ಹಿಮಪಾತದ ಪ್ರಮಾಣಕ್ಕೆ ಇದು ಸಮವಾಗಿದೆ. ಕಳೆದ 48 ಗಂಟೆಯಲ್ಲಿ (ರವಿವಾರ ಬೆಳಗ್ಗಿನವರೆಗೆ) ಆರ್ಚರ್ಡ್ ಪಾರ್ಕ್ ಪ್ರದೇಶದಲ್ಲಿ 77 ಇಂಚ್‌ಗಳಷ್ಟು ಹಿಮಪಾತವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ಸಿಬಂದಿ ಗರಿಷ್ಟ ಪ್ರಯತ್ನ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ.
ಸೌತ್ ಬಫೆಲೊ ಪ್ರದೇಶದಲ್ಲಿ 5.6 ಇಂಚಿನಷ್ಟು ಹಿಮಪಾತವಾಗಿದ್ದು ಎರೀ ಸರೋವರದ ದಡ ಹಿಮದಿಂದ ಆವೃತವಾಗಿದೆ. ಜತೆಗೆ ಗಂಟೆಗೆ 35 ಕಿ.ಮೀ ವೇಗದಲ್ಲಿ ಗಾಳಿಯೂ ಬೀಸುತ್ತಿದ್ದು ರಸ್ತೆ ಸಂಚಾರ ಮೊಟಕುಗೊಂಡಿದೆ. 2000ನೇ ಇಸವಿಯ ನವೆಂಬರ್ ಬಳಿಕ ಇಷ್ಟು ಪ್ರಮಾಣದ ಹಿಮ ಸುರಿದಿರುವುದು ಇದೇ ಪ್ರಥಮ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಿಮದಿಂದ ಮುಚ್ಚಿಹೋಗಿರುವ ಮನೆಗಳ ವೀಡಿಯೊ ತುಣುಕನ್ನು ಬಫೆಲೊ ಪ್ರಾಂತದ ಹವಾಮಾನ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.