ನಷ್ಟ ಮತ್ತು ನಾಶ ಪರಿಹಾರ ನಿಧಿ ಪ್ರಸ್ತಾವನೆಗೆ ಸಿಒಪಿ ಶೃಂಗಸಭೆ ಒಪ್ಪಿಗೆ

ಕೈರೊ, ನ.20: ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳಿಂದ ಜರ್ಜರಿತವಾಗಿರುವ ದುರ್ಬಲ ರಾಷ್ಟ್ರಗಳು ಅನುಭವಿಸುತ್ತಿರುವ ಹಾನಿಯನ್ನು ಸರಿದೂಗಿಸಲು ವಿಶೇಷ ನಿಧಿಯನ್ನು ರಚಿಸಲು ವಿಶ್ವಸಂಸ್ಥೆಯ ಸಿಒಪಿ27 ಶೃಂಗಸಭೆ ಭಾನುವಾರ ಅನುಮೋದನೆ ನೀಡಿದೆ. ಶೃಂಗಸಭೆಯ ಪ್ಯಾಕೇಜ್‌ನಿಂದ ತೀವ್ರ ನಿರಾಶೆಯಾಗಿದೆ ಎಂದು ಬ್ರಿಟನ್ ಹಾಗೂ ಯುರೋಪಿಯನ್ ಯೂನಿಯನ್ ಪ್ರತಿಕ್ರಿಯಿಸಿದರೆ, ಇದೊಂದು ಐತಿಹಾಸಿಕ ನಿರ್ಧಾರ.
ಜಗತ್ತು ಇದಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿತ್ತು ಎಂದು ಭಾರತ ಬಣ್ಣಿಸಿದೆ. ಹವಾಮಾನ ‘ನಷ್ಟ ಮತ್ತು ಹಾನಿಗಾಗಿ’ ನಿಧಿಯನ್ನು ಸ್ಥಾಪಿಸುವ ಉದ್ದೇಶ ಈ ಶೃಂಗಸಭೆಯಲ್ಲಿ ವಿಫಲಗೊಳ್ಳಬಹುದು ಎಂಬ ಭೀತಿಯನ್ನು 2 ವಾರಗಳ ಚರ್ಚೆ ದೂರಗೊಳಿಸಿದೆ. ನಿಧಿ ಸ್ಥಾಪಿಸುವ ಪ್ರಸ್ತಾವನೆ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ಪಡೆದಿರುವುದನ್ನು ಪ್ರತಿನಿಧಿಗಳು ಕರತಾಡನದ ಮೂಲಕ ಸೂಚಿಸಿದರು. ಇದು 1.3 ಶತಕೋಟಿ ಆಫ್ರಿಕನ್ನರಿಗೆ ಧನಾತ್ಮಕ ಫಲಿತಾಂಶವಾಗಿದೆ ಎಂದು ಝಾಂಬಿಯಾದ ಹಸಿರು ಆರ್ಥಿಕತೆ ಮತ್ತು ಪರಿಸರ ಸಚಿವ ಕಾಲಿನ್ಸ್ ನೊಝೊವು ಪ್ರತಿಕ್ರಿಯಿಸಿದ್ದಾರೆ.
ಆದರೆ, ಜಾಗತಿಕ ತಾಪಮಾನವನ್ನು ಕೈಗಾರಿಕೆ ಪೂರ್ವ ಅವಧಿಯ ಮಟ್ಟದಿಂದ 1.5 ಡಿಗ್ರಿ ಸೆಲ್ಶಿಯಸ್‌ಗೆ ಸೀಮಿತಗೊಳಿಸುವ ಮಹಾತ್ವಾಕಾಂಕ್ಷೆಯ ಗುರಿಯನ್ನು ಪೂರೈಸುವ ಸಲುವಾಗಿ ಹೊರಸೂಸುವಿಕೆಯಲ್ಲಿ ಕ್ಷಿಪ್ರ ಕಡಿತ ಸೇರಿದಂತೆ ಇತರ ವಿವಾದಾತ್ಮಕ ವಿಷಯಗಳನ್ನು ಒಳಗೊಂಡಿರುವ ಹಲವು ನಿರ್ಧಾರಗಳಿಗೆ ಸಭೆಯ ಅನುಮೋದನೆ ಇನ್ನಷ್ಟೇ ದೊರಕಬೇಕಿದೆ. ಈ ಮಧ್ಯೆ, ನಿರ್ಣಯದ ಕರಡು ಪಠ್ಯವನ್ನು ಪರಿಶೀಲಿಸಲು ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಸ್ವಿಝರ್ಲ್ಯಾಂಡ್ ಕೋರಿದ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಭೂಮಿಯ ತಾಪಮಾನವನ್ನು ಹೆಚ್ಚಿಸುವ ಪಳೆಯುಳಿಕೆ ಇಂಧನ ಬಳಕೆಯಿಂದ ದೂರ ಸರಿಯುವ ಹಾಗೂ 1.5 ಡಿಗ್ರಿ ಸೆಲ್ಶಿಯಸ್ ಗುರಿಯನ್ನು ಪುನರುಚ್ಚರಿಸಲು ಕಠಿಣ ಮತ್ತು ಬಲವಾದ ಭಾಷೆಯ ಅಗತ್ಯವಿದೆ ಎಂದು ‘ಉನ್ನತ ಮಹಾತ್ವಾಂಕ್ಷೆಯ’ ದೇಶಗಳ ಅನೌಪಚಾರಿಕ ಒಕ್ಕೂಟವು ಕರೆ ನೀಡಿತ್ತು. ಕೆಟ್ಟ ನಿರ್ಧಾರದಲ್ಲಿ ಭಾಗಿಯಾಗುವ ಬದಲು ಸಭೆಯಿಂದ ಹೊರತೆರಳಲು ಇಚ್ಛಿಸುವುದಾಗಿ ಯುರೋಪಿಯನ್ ಒಕ್ಕೂಟ ಬೆದರಿಕೆ ಹಾಕಿತ್ತು.
ಶೃಂಗಸಭೆಯ ಕರಡು ನಿರ್ಣಯದಲ್ಲಿ ‘ಕಲ್ಲಿದ್ದಲು ಇಂಧನದ ಬಳಕೆಯನ್ನು ಹಂತಹಂತವಾಗಿ ಕಡಿಮೆಗೊಳಿವುದು ಹಾಗೂ ಅಸಮರ್ಥ ಪಳೆಯುಳಿಕೆ ಇಂಧನ ಸಬ್ಸಿಡಿಯನ್ನು ಹಂತಹಂತವಾಗಿ ರದ್ದುಗೊಳಿಸುವಂತೆ’ ಕರೆ ನೀಡಲಾಗಿದೆ. ಪಳೆಯುಳಿಕೆ ಇಂಧನದ ಕುರಿತ ಉಲ್ಲೇಖದ ಬಗ್ಗೆ ಆಕ್ಷೇಪ ಕೇಳಿಬಂದಿದ್ದು ಈ ಪದವನ್ನು ನಿರ್ಣಯದಿಂದ ತೆಗೆದುಹಾಕುವಂತೆ ಒತ್ತಡವಿದೆ ಎಂದು ಪಪುವಾ ನ್ಯೂಗಿನಿಯಾದ ಪ್ರತಿನಿಧಿ ಹೇಳಿದ್ದಾರೆ. ಹಾನಿ ಮತ್ತು ನಷ್ಟದ ನಿಧಿ ಸ್ಥಾಪಿಸುವ ಒಪ್ಪಂದದ ಬಗ್ಗೆ ಶೃಂಗಸಭೆಯಲ್ಲಿ ಪಟ್ಟುಬಿಡದೆ ಆಗ್ರಹಿಸಿದ ಅಭಿವೃದ್ಧಿಶೀಲ ದೇಶಗಳು, ಅಂತಿಮವಾಗಿ ಶ್ರೀಮಂತ ಮಾಲಿನ್ಯಕಾರ ದೇಶಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದುವರೆಗೆ 1.2 ಡಿಗ್ರಿ ಸೆಲ್ಶಿಯಸ್ ತಾಪಮಾನದೊಂದಿಗೆ ಜಗತ್ತು ಹವಾಮಾನ ಚಾಲಿತ ವೈಪರೀತ್ಯಗಳಿಗೆ ಸಾಕ್ಷಿಯಾಗಿದ್ದು, ಇದು ಅಭಿವೃದ್ಧಿಶೀಲ ದೇಶಗಳ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸಿರುವ ಜತೆಗೆ, ಇಂಧನ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆ, ಸಾಲದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಅಭಿವೃದ್ಧಿಶೀಲ ದೇಶಗಳು, ನಿರ್ದಿಷ್ಟವಾಗಿ ದುರ್ಬಲ ದೇಶಗಳಿಗೆ ಈ ನಿಧಿಯನ್ನು ಸಜ್ಜುಗೊಳಿಸಲಾಗುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
‘ನಿರ್ದಿಷ್ಟವಾಗಿ ದುರ್ಬಲ ದೇಶ’ ಎಂಬ ಪದವನ್ನು ಸೇರಿಸುವಂತೆ ಯುರೋಪಿಯನ್ ಯೂನಿಯನ್ ಆಗ್ರಹಿಸಿತ್ತು. ಚೀನಾದಂತಹ ಶ್ರೀಮಂತ ಅಭಿವೃದ್ಧಿಶೀಲ ದೇಶಗಳು ಈ ನಿಧಿಯ ಫಲಾನುಭವಿಯಾಗಬಾರದು ಎಂದು ಯುರೋಪಿಯನ್ ಯೂನಿಯನ್ ಪ್ರತಿಪಾದಿಸಿದೆ.
ಇದೀಗ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಪರಿವರ್ತನಾ ಸಮಿತಿ ಹಲವು ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಅಂತಿಮ ನಿರ್ಣಯವನ್ನು ಶೃಂಗಸಭೆ ಒಪ್ಪುತ್ತದೆಯೇ ಎಂಬುದರ ಮೇಲೆ ಈಗ ಗಮನ ಹರಿಸಬೇಕಿದೆ ಎಂದು ಕೊಲಂಬಿಯಾದ ಪ್ರತಿನಿಧಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಪ್ರಸ್ತುತ ಯೋಜನೆ ಹಾಗೂ ಬದ್ಧತೆಯ್ನನ್ನು ಗಮನಿಸಿದರೆ ಜಗತ್ತು 2.5 ಡಿಗ್ರಿ ಸೆಲ್ಶಿಯಸ್ ತಾಪಮಾನದತ್ತ ಸಾಗುತ್ತಿದೆ. ಜಗತ್ತನ್ನು ಹವಾಮಾನ ದುರಂತದ ಪರಿಣಾಮದಿಂದ ರಕ್ಷಿಸಬೇಕಿದ್ದರೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್‌ಗೆ ಸೀಮಿತಗೊಳಿಸುವುದು ಅತ್ಯಗತ್ಯವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.