ಕಾಡಾನೆ ದಾಳಿಗೆ ಮಹಿಳೆ ಬಲಿ: ಮೃತದೇಹ ನೋಡಲು ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಗ್ರಾಮಸ್ಥರಿಂದ ಹಲ್ಲೆ; ಆರೋಪ
ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಘಟನೆ ಸಂಬಂಧ ಮಹಿಳೆಯ ಮೃತದೇಹ ನೋಡಲು ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿ ಹಲ್ಲೆ ನಡೆಸಿದ್ದು, ಅವರ ಬಟ್ಟೆಯನ್ನೂ ಹರಿದು ಹಾಕಿದ್ದಾರೆನ್ನಲಾದ ಘಟನೆ ರವಿವಾರ ಸಂಜೆ ನಡೆದಿದೆ.
ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದಲ್ಲಿ ರವಿವಾರ ಮುಂಜಾನೆ ಕಾಡಾನೆ ದಾಳಿಯಿಂದ ಶೋಭಾ ಎಂಬವರು ಮೃತಪಟ್ಟಿದ್ದರು.
ಮಹಿಳೆ ರವಿವಾರ ಬೆಳಗ್ಗೆ ಮೃತಟ್ಟಿದ್ದರೂ ಶಾಸಕ ಕುಮಾರಸ್ವಾಮಿ ಅವರು ಮೃತದೇಹ ನೋಡಲು ಸಂಜೆ ವೇಳೆ ತೆರಳಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶಾಸಕರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವುದಲ್ಲದೇ ಬಟ್ಟೆಯನ್ನು ಹರಿದಿದ್ದಾರೆಂದು ಆರೋಪಿಸಲಾಗಿದೆ.
ಶಾಸಕ ಕುಮಾರಸ್ವಾಮಿ ಅವರು ರವಿವಾರ ಮೂಡಿಗೆರೆ ಕ್ಷೇತ್ರದಲ್ಲೇ ಇದ್ದು, ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಸುದ್ದಿ ಅವರಿಗೆ ತಿಳಿದಿದ್ದರೂ ಸಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡದೇ ರಾತ್ರಿ ವೇಳೆ ಸ್ಥಳಕ್ಕೆ ತೆರಳಿದ್ದಾರೆಂದು ಆರೋಪಿಸಲಾಗಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಶಾಸಕ ಕುಮಾರಸ್ವಾಮಿ ಅವರಿಗೆ ಘೆರಾವ್ ಹಾಕಿ ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದಾರೆ. ಉದ್ರಿಕ್ತಗೊಂಡ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಪರಿಸ್ಥಿತಿ ಕೈ ಮೀರಿದ ವೇಳೆ ಲಾಠಿ ಪ್ರಹಾರವನ್ನೂ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಹರಿದ ಬಟ್ಟೆಯಲ್ಲೇ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವೀಕ್ಷಿಸಲು ತೆರಳಿದ ವೇಳೆ ನನ್ನ ಮೇಲೆ ಗ್ರಾಮಸ್ಥರು ಆಕ್ರೋಶಗೊಂಡು ಅಟ್ಟಾಡಿಸಿದ್ದಲ್ಲದೇ ಹಲ್ಲೆಯನ್ನೂ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿತಯಾಗಿದೆ. ನಮ್ಮದೇ ಸರ್ಕಾರದ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.