ಲೋಕಾಯುಕ್ತ ಪೊಲೀಸರ ದಾಳಿ; ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯನ ಬಂಧನ
ಸಾಗರ(ಜೋಗ ) : ಅಂಗಡಿ ಮಾಲಕನಿಂದ 50,000 ರೂ. ಲಂಚ ಪಡೆಯುವ ವೇಳೆ ಜೋಗ ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯ ಕೆ.ಸಿ. ಹರೀಶ್ ನನ್ನು ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಘಟನೆಯ ವಿವರ : ಜೋಗದ ಬಝಾರ್ ಲೈನ್ ಲ್ಲಿರುವ ಕೋಳಿ ಮಾಂಸ ಮಾರಾಟ ಅಂಗಡಿ ಮಾಲಕ ಅಹಮದ್ ಬಾಕಿ ಅವರಿಗೆ ತ್ಯಾಜ್ಯವನ್ನು ಪಕ್ಕದ ಚರಂಡಿಗೆ ಎಸೆಯುತ್ತಿದ್ದ ಕಾರಣ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿಯು ಅಂಗಡಿ ಮುಚ್ಚುವಂತೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿತ್ತು. ನಂತರ ಅದೇ ವಾರ್ಡ್ ನ ಸದಸ್ಯರಾಗಿರುವ ಹರೀಶ್ ಅವರು ಮಾಲಕನನ್ನು ಸಂಪರ್ಕಿಸಿ 1,00,000 ರೂ. ಹಣಕ್ಕೆ ಬೇಡಿಕೆ ಇಟ್ಟು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರೆನ್ನಲಾಗಿದೆ.
ಮಾತುಕತೆ ನಡೆದು 50,000 ರೂ. ಕೊಡುವುದಾಗಿ ಕೋಳಿ ಮಾಂಸ ಮಾರಾಟ ಅಂಗಡಿ ಮಾಲಕ ಒಪ್ಪಿಕೊಂಡಿದ್ದರು. ನಂತರ ಅವರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆ ಸಿ ಹರೀಶ್ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಚಿಕನ್ ಅಂಗಡಿ ಮಾಲಕ ಅಹಮದ್ ಬಾಕಿಯಿಂದ ಲಂಚದ ಹಣ ಪಡೆಯುವಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಲೋಕಾಯುಕ್ತ ಎಸ್ ಪಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು.