ಬೆಳಗಾವಿ ಗಡಿ ವಿವಾದ: ಸರ್ವಪಕ್ಷಗಳ ಸಭೆ ಕರೆಯಲು ಸಿದ್ದರಾಮಯ್ಯ ಆಗ್ರಹ
![ಬೆಳಗಾವಿ ಗಡಿ ವಿವಾದ: ಸರ್ವಪಕ್ಷಗಳ ಸಭೆ ಕರೆಯಲು ಸಿದ್ದರಾಮಯ್ಯ ಆಗ್ರಹ ಬೆಳಗಾವಿ ಗಡಿ ವಿವಾದ: ಸರ್ವಪಕ್ಷಗಳ ಸಭೆ ಕರೆಯಲು ಸಿದ್ದರಾಮಯ್ಯ ಆಗ್ರಹ](https://www.varthabharati.in/sites/default/files/images/articles/2022/11/21/357182-1669039912.jpg)
ಬೆಂಗಳೂರು, ನ. 21: ‘ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಬದ್ಧವಾಗಿ ರಾಜ್ಯ ಬಿಜೆಪಿ ಸರಕಾರ ಕೈಗೊಳ್ಳುವ ಕ್ರಮಗಳನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ. ಕಾಲವ್ಯಯ ಮಾಡದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷಗಳ ಸಭೆ ಕರೆದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸುಪ್ರೀಂ ಕೋರ್ಟ್ನಲ್ಲಿ ತಮ್ಮ ರಾಜ್ಯ ಮಂಡಿಸಬೇಕಾದ ವಾದದ ಬಗ್ಗೆ ಸಮಾಲೋಚನೆ ನಡೆಸಲು ವಿರೋಧ ಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿರುವುದು ಆ ರಾಜ್ಯ ಗಡಿವಿವಾದವನ್ನು ಎಷ್ಟೊಂದು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.
‘ಬೆಳಗಾವಿ ಗಡಿ ವಿವಾದದ ಬಗ್ಗೆ ನ.23ರಂದು ಸುಪ್ರೀಂ ಕೋರ್ಟ್ ನಡೆಸಲಿರುವ ವಿಚಾರಣೆಯನ್ನು ಎದುರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಭರದಿಂದ ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರಕಾರ ವಿಶೇಷ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರಕಾರ ಎಚ್ಚೆತ್ತುಕೊಂಡು ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.