ಮಣಿಪಾಲದ ಮೈಥಿಲಿ ಪದವು ರಾಷ್ಟ್ರೀಯ ಬಯೋಕ್ವಿಝ್ ಚಾಂಪಿಯನ್

ಉಡುಪಿ: ಮಣಿಪಾಲದ ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ಬಿಎಸ್ಸಿ ಬಯೋಟೆಕ್ನಾಲಜಿಯ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಮೈಥಿಲ್ ಪದವು ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಬಯೋಕ್ವಿಝ್ ಸ್ಪರ್ಧೆ-2022ರಲ್ಲಿ ಮೊದಲ ಬಹುಮಾನ ಗೆದ್ದು ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಕರ್ನಾಟಕ ಸರಕಾರದ ಇಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ಸಾಯನ್ಸ್ ಎಂಡ್ ಟೆಕ್ನಾಲಜಿ ಇಲಾಖೆಯು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್-2022ರ ಸಂದರ್ಭದಲ್ಲಿ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕ್ವಿಝ್ ಚಾಂಪಿಯನ್‌ಷಿಪ್‌ನಲ್ಲಿ ಮೈಥಿಲಿ ಅಗ್ರಸ್ಥಾನವನ್ನು ಅಲಂಕರಿಸಿದರು.
25ನೇ ವರ್ಷದಲ್ಲಿ ನಡೆದಿರುವ ಬೆಂಗಳೂರು ಟೆಕ್ ಸಮ್ಮಿಟ್‌ನ ಅಂಗವಾಗಿ ಬಯೋಕ್ವಿಝ್-2022ನ್ನು ಆಯೋಜಿಸಲಾಗಿತ್ತು. ಬಯೋಟೆಕ್ನಾಲಜಿ ವಿಷಯದಲ್ಲಿ ನಡೆದ ಅತ್ಯಂತ ದೊಡ್ಡ ರಾಷ್ಟ್ರೀಯ ಕ್ವಿಝ್ ಸ್ಪರ್ಧೆ ಇದಾಗಿತ್ತು. ಇದರ ಸ್ಪರ್ಧೆಗಳು ಮೂರು ಸುತ್ತುಗಳಲ್ಲಿ ನಡೆದಿದ್ದವು.
ಪ್ರಾಥಮಿಕ ಸುತ್ತಿನ ಸ್ಪರ್ಧೆಗಳು ನ.5-6ರಂದು, ವಲಯ ಮಟ್ಟದ ಸ್ಪರ್ಧೆಗಳು ನ.10 ಹಾಗೂ ಅಂತಿಮವಾಗಿ ಪೈನಲ್ ಸ್ಪರ್ಧೆ ನ.18ರಂದು ಬೆಂಗಳೂರಿನಲ್ಲಿ ನಡೆದಿತ್ತು. ಪದವಿಗಾಗಿ ಓದುತ್ತಿರುವ ಎಲ್ಲಾ ವಿಭಾಗದ ವಿದ್ಯಾರ್ಥಿಗಳೂ ಬಯೋಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು.
ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಜಯಗಳಿಸಿದ ಮೈಥಿಲಿ ಅವರು ಆರು ಮಂದಿ ಇದ್ದ ದಕ್ಷಿಣ ವಲಯ ಫೈನಲ್ಸ್‌ಗೆ ತೇರ್ಗಡೆಗೊಂಡಿದ್ದರು. ಇಲ್ಲೂ ಅಗ್ರಸ್ಥಾನಿಯಾದ ಅವರು ಗ್ರಾಂಡ್ ಫೈನಲ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದರು. ಭಾರತದ ನಾಲ್ಕು ವಲಯಗಳಲ್ಲೂ ಅಗ್ರಸ್ಥಾನ ಪಡೆದಿದ್ದ ನಾಲ್ವರು ಪದವಿ ವಿದ್ಯಾರ್ಥಿಗಳು ಫೈನಲ್ಸ್‌ಗೆ ತೇರ್ಗಡೆಗೊಂಡಿದ್ದರು.
ಅತ್ಯಂತ ಸವಾಲಿನ ಹಾಗೂ ಕುತೂಹಲ ಕೆರಳಿಸುವಂತಿದ್ದ ಫೈನಲ್‌ನಲ್ಲಿ ಮೈಥಿಲಿ ಅತ್ಯಂತ ಸುಲಭವಾಗಿ ಅಗ್ರಸ್ಥಾನ ಪಡೆದರು. ಅವರು ಫೈನಲ್‌ನಲ್ಲಿ 250 ಅಂಕಗಳನ್ನು ಪಡೆದರೆ, ಮೊದಲ ರನ್ನರ್ ಅಪ್ ಪಡೆದ ವಿದ್ಯಾರ್ಥಿ 150 ಅಂಕ ಗಳಿಸಿದ್ದರು. ಮೈಥಿಲಿ ಅವರು ನಗದು ಬಹುಮಾನ ಹಾಗೂ ಸರ್ಟಿಫಿಕೇಟ್‌ಗಳನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್‌ನಾರಾಯಣ್‌ರಿಂದ ಸ್ವೀಕರಿಸಿದರು.
ಸಮಾರೋಪ ಸಮಾರಂಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಹಾಗೂ ಕಿಟ್ಸ್‌ನ ಆಡಳಿತ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು. ಖ್ಯಾತ ಕ್ವಿಝ್ ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯ ಕ್ವಿಝ್ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಮೈಥಿಲಿ ಪದವು ಅವರ ಸಾಧನೆಯನ್ನು ಮಾಹೆಯ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಹಾಗೂ ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ನಿರ್ದೇಶಕ ಡಾ.ಸತೀಶ್ ರಾವ್ ಪ್ರಶಂಸಿಸಿದ್ದಾರೆ.







