ಉಡುಪಿ: 34 ಕಲಾವಿದರ ‘ಮೊಡೆಪು’ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ಉಡುಪಿ, ದ.ಕನ್ನಡ ಜಿಲ್ಲೆಗಳ ಅಗಲಿದ ಕಲಾವಿದರ ಚಿತ್ರ ಪ್ರದರ್ಶನ

ಉಡುಪಿ: ನಗರದ ಪ್ರಸಿದ್ಧ ಚಿತ್ರಕಲಾ ಸಂಸ್ಥೆ ಆರ್ಟಿಸ್ಟ್ಸ್ ಫೋರಂ ಸಂಯೋಜಿಸಿದ ಕರಾವಳಿಯ 34 ಮಂದಿ ಅಗಲಿದ ಹಿರಿಯ ಚಿತ್ರಕಲಾವಿದರ ‘ಮೊಡೆಪು’ ಚಿತ್ರ ಕಲಾಪ್ರದರ್ಶನ ದೃಷ್ಟಿ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿದೆ.
ನ.27ರವರೆಗೆ ನಡೆಯುವ ಈ ಚಿತ್ರಕಲಾ ಪ್ರದರ್ಶನವನ್ನು ಮಣಿಪಾಲದ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕರಾದ ಪ್ರೊ.ಟಿ.ರಂಗ ಪೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಐತಿಹಾಸಿಕವಾದ ದಾಖಲಾತಿ ಪ್ರಯತ್ನವೆಂದು ಶ್ಲಾಘಿಸಿದರು.
ಇಂದು ಮಕ್ಕಳಲ್ಲಿ ಕಲಾವಂತಿಕೆ ಬೆಳೆಯಬೇಕು ಮತ್ತು ಅದರ ಜೊತೆಜೊತೆಗೇ ಇತರ ಲಲಿತಕಲಾ ಪ್ರಕಾರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವಂತಾಗಬೇಕು. ಮಕ್ಕಳ ಇಂಥ ಪ್ರತಿಭೆಯನ್ನು ಶೈಕ್ಷಣಿಕ ಹಂತಗಳಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಆಗಬೇಕು ಎಂದು ಸ್ವತಹ ಸಂಗೀತ ಕಲಾವಿದರೂ ಆಗಿರುವ ರಂಗ ಪೈ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ಇಂಟ್ಯಾಕ್ ಮಂಗಳೂರು ವಿಭಾಗದ ಕನ್ವೀನಿಯರ್, ಆರ್ಕಿಟೆಕ್ಟ್ ಸುಭಾಷ್‌ಚಂದ್ರ ಬಸು ಮಾತನಾಡಿ ಕರಾವಳಿಯ ಅಗಲಿದ ಹಿರಿಯ ಕಲಾವಿದರ ಬಗ್ಗೆ ದಾಖಲಾತಿಗಳು ನಡೆಯದೇ ಅದು ಮುಂದಿನ ಪೀಳಿಗೆಗೆ ತಿಳಿಯದೇ ಹೋಗುವ ಸಂಭವವಿದೆ ಎಂದರು. ಇನ್ನೋರ್ವ ಅತಿಥಿ ಉಡುಪಿ ಅದಿತಿ ಕಲಾ ಗ್ಯಾಲರಿಯ ನಿರ್ದೇಶಕ ಡಾ.ಕಿರಣ್ ಆಚಾರ್ಯ ಮಾತನಾಡಿ, ನಮ್ಮ ಭಾಗದ ಕಲೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳ ಈ ತೆರನಾದ ದಾಖಲಾತಿ ಪ್ರಯತ್ನಗಳು ಇನ್ನಷ್ಟು ನಡೆಯಲಿ ಎಂದು ಆಶಿಸಿದರು.
ಆರ್ಟಿಸ್ಟ್ ಫೋರಂನ ಅಧ್ಯಕ್ಷರಾದ ಹಿರಿಯ ಕಲಾವಿದ ರಮೇಶ್ ರಾವ್ ಮಾತನಾಡಿದರು. ಈ 34 ಕಲಾವಿದರ ಜೀವನ ಮತ್ತು ಕಲಾಯಾತ್ರೆಯ ಬಗೆಗಿನ ಪುಸ್ತಕ ‘ಮೊಡೆಪು’ನ ಕೃತಿಕಾರ ಡಾ.ಜನಾರ್ದನ ಹಾವಂಜೆ ಅತಿಥಿಗಳನ್ನು ಸ್ವಾಗತಿಸಿ, ಇದರ ಹಿಂದಿನ ಪ್ರಯತ್ನ, ದಾಖಲಾತಿಯ ಅನಿವಾರ್ಯತೆ ಬಗ್ಗೆ ವಿವರಿಸಿದರು. ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.
ಈ ಕಲಾಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಜಿ. ಪಾವಂಜೆ ಲಲಿತಕಲಾ ಪೀಠ, ಇಂಟ್ಯಾಕ್ ಮಂಗಳೂರು ಮತ್ತು ಆರ್ಟ್ ಕೆನರಾ ಟ್ರಸ್ಟ್ ಹಾಗೂ ಆರ್ಟಿಸ್ಟ್ ಪೋರಂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಯೋಜಿಸಲ್ಪಟ್ಟಿದೆ.
ಈ ಚಿತ್ರಕಲಾ ಪ್ರದರ್ಶನ ನವೆಂಬರ್ 27ರವರೆಗೆ ಅಪರಾಹ್ನ 3:00 ಗಂಟೆಯಿಂದ ಸಂಜೆ 7:00ಗಂಟೆಯವರೆಗೆ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಟಿಯಲ್ಲಿ ಕಲಾಸಕ್ತರ ವೀಕ್ಷಣೆಗೆ ತೆರೆದಿರುತ್ತದೆ.
34 ಹಿರಿಯ ಕಲಾವಿದರ ಅಪರೂಪದ ಚಿತ್ರಗಳು
ಮೊಡೆಪು ಚಿತ್ರಕಲಾ ಪ್ರದರ್ಶನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಮ್ಮಗಲಿರುವ 34 ಮಂದಿ ಪ್ರಸಿದ್ಧ ಕಲಾವಿದರ ಚಿತ್ರಗಳ ಪ್ರದರ್ಶನವಿದೆ.
ಗೋಪಾಲಕೃಷ್ಣ ಪಾವಂಜೆ, ಎನ್.ಜಿ.ಪಾವಂಜೆ, ಜಿ.ಎಸ್.ಶೆಣೈ, ಕೆ.ಶಿವರಾಮ ಕಾರಂತ, ಕೆ.ಕೆ.ಹೆಬ್ಬಾರ್, ಪ್ರಮೀಳಾ ಚೊಳಯ್ಯ, ಬಿ.ಪಿ.ಬಾಯರಿ, ಎಲ್.ಕೆ. ಶೆವಗೂರ್, ಬಿ.ಜಿ.ಮಹಮ್ಮದ್, ಕಾ.ವಾ.ಆಚಾರ್ಯ, ಆರ್ಯ ಆಚಾರ್ಯ, ಅಶೋಕ್ ಶಿರಾಲಿ, ಮೋಹನ್ ಸೋನ, ಜಿ.ಎಸ್.ಕೋಡಿಕಲ್, ಮಂಗೇಶ್ ಶಿರಾಲಿ, ಕೆ.ವಿ.ರಾವ್, ಎನ್.ಎಸ್.ಭಟ್, ಕೆ.ಎಲ್.ಭಟ್, ಸಂಜೀವ ಶೆಟ್ಟಿ ಮುಂತಾದ ಕಲಾವಿದರ ಚಿತ್ರಗಳ ಪ್ರದರ್ಶನವಿದೆ.








