ಇರಾಕ್ ನ ಕುರ್ದಿಷ್ ನೆಲೆಯ ವಿರುದ್ಧ ಇರಾನ್ ವಾಯುದಾಳಿ

ಟೆಹ್ರಾನ್, ನ.21: ನೆರೆಯ ಇರಾಕ್(Iraq) ನಲ್ಲಿರುವ ಕುರ್ದಿಸ್ತಾನ ಮೂಲದ ಕುರ್ದಿಷ್ (Kurdish)ವಿರೋಧ ಗುಂಪುಗಳ ವಿರುದ್ಧ ಇರಾನ್ ರವಿವಾರ ಹೊಸದಾಗಿ ವಾಯುದಾಳಿ ಆರಂಭಿಸಿದೆ ಎಂದು ವರದಿಯಾಗಿದೆ.
ಇರಾನ್ ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ (Revolutionary Guard Corprs)ಪಡೆ ಮತ್ತೊಮ್ಮೆ ಕುರ್ದಿಷ್ ಗುಂಪಿನ ಮೇಲೆ ಬಾಂಬ್ ನ ಸುರಿಮಳೆಗರೆದಿದ್ದಾರೆ ಎಂದು ಇರಾಕಿ ಕುರ್ದಿಸ್ತಾನದ ಭಯೋತ್ಪಾದನೆ ನಿಗ್ರಹ ಘಟಕ ಹೇಳಿದೆ. ಇರಾಕಿ ಕುರ್ದಿಸ್ತಾನದ ರಾಜಧಾನಿ ಅರ್ಬಿಲ್ ಬಳಿಯ ಕೋಯಾ (Koya)ಮತ್ತು ಜೆಜ್ನಿಕಾನ್ ನಗರ(City of Jezhnikon)ವನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ಹಾಗೂ ಆತ್ಮಹತ್ಯಾ ಡ್ರೋನ್ ದಾಳಿ ನಡೆಸಿದೆ.
ಇರಾನಿ ಕುರ್ದಿಸ್ತಾನದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸಲು ಇರಾನ್ನ ಭಯೋತ್ಪಾದಕ ಆಡಳಿತ ವಿಫಲಗೊಂಡ ಸಂದರ್ಭದಲ್ಲೇ ಈ ವಿವೇಚನಾರಹಿತ ದಾಳಿ ನಡೆದಿದೆ ಎಂದು ಡೆಮೊಕ್ರಟಿಕ್ ಪಾರ್ಟಿ ಆಫ್ ಇರಾನಿಯನ್ ಕುರ್ದಿಸ್ತಾನ್(ಪಿಡಿಕೆಐ)ನ ಹೇಳಿಕೆ ತಿಳಿಸಿದೆ.
ಉತ್ತರ ಇರಾಕ್ ನಲ್ಲಿರುವ ನಮ್ಮ ಪ್ರಧಾನ ಕಚೇರಿಯ ಮೇಲೆ ಮತ್ತೊಮ್ಮೆ ಇಸ್ಲಾಮಿಕ್ ಆಡಳಿತ ದಾಳಿ ನಡೆಸಿದೆ. ಯಾವುದೇ ನಷ್ಟ ಅಥವಾ ಹಾನಿಯ ಬಗ್ಗೆ ತಕ್ಷಣಕ್ಕೆ ಮಾಹಿತಿಯಿಲ್ಲ. ಈ ರೀತಿಯ ದಾಳಿಗೆ ನಾವು ಎಚ್ಚರಿಕೆಯಿಂದ ಸನ್ನದ್ಧರಾಗುತ್ತಿದ್ದೇವೆ ಎಂದು ಇರಾನಿಯನ್ ಕುರ್ದಿಶ್ ರಾಷ್ಟ್ರೀಯತಾವಾದಿ ಗುಂಪು `ಕೊಮಾಲ' (``young'')ಟ್ವೀಟ್ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್ನ ದಾಳಿಯನ್ನು ಖಂಡಿಸಿದೆ.
ಗಡಿದಾಟಿ ಇರಾನ್ ನಡೆಸಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ಖಂಡಿಸುತ್ತೇವೆ. ಇಂತಹ ಕಾನೂನುಬಾಹಿರ ಮತ್ತು ವಿವೇಚನಾ ರಹಿತ ದಾಳಿಗಳು ನಾಗರಿಕರಿಗೆ ಹೆಚ್ಚಿನ ಅಪಾಯ ತರುತ್ತದೆ ಮತ್ತು ಇರಾಕ್ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ.
ಜತೆಗೆ, ಇರಾಕ್ ಹಾಗೂ ಮಧ್ಯಪ್ರಾಚ್ಯದಲ್ಲಿ ಕಷ್ಟಪಟ್ಟು ಸಾಧಿಸಿದ ಭದ್ರತೆ ಮತ್ತು ಸ್ಥಿರತೆಯನ್ನು ಗಂಡಾಂತರಕ್ಕೆ ಸಿಲುಕಿಸುತ್ತದೆ ಎಂದು ಅಮೆರಿಕದ ಕಮಾಂಡರ್ ಮೈಕಲ್ ಕುರಿಲ್ಲಾ ಹೇಳಿದ್ದಾರೆ. ಇರಾಕಿ ಕುರ್ದಿಸ್ತಾನದಲ್ಲಿರುವ ಇರಾನ್ನ ಮೂರು ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಇರಾನ್ ವಾಯುದಾಳಿ ನಡೆಸಿದೆ ಎಂದು ಇರಾಕ್ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಐಎನ್ಎ ವರದಿ ಮಾಡಿದೆ.