ಗಲ್ಫ್ ಮೆಡಿಕಲ್ ವಿವಿಯ 24ನೇ ವಾರ್ಷಿಕ ದಿನಾಚರಣೆ
ಅಜ್ಮಾನ್ (ಯುಎಇ): ‘ನಾವು 24 ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯಲ್ಲಿ ನಮ್ಮ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪಾಲುದಾರರ ಸಮರ್ಪಣಾ ಮನೋಭಾವ ಪ್ರಮುಖ ಪಾತ್ರವನ್ನು ವಹಿಸಿದೆ. ಜೊತೆಗೆ ನಿರಂತರ ಹೊಸತನದ ಜಿಎಂಯು ಸಿದ್ಧಾಂತ ಪೂರಕವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ದೇವರ ಆಶೀರ್ವಾದವಾಗಿದೆ ಎಂದು ಜಿಎಂಯು ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು ಹೇಳಿದರು.
ಇಲ್ಲಿಯ ಗಲ್ಫ್ ಮೆಡಿಕಲ್ ವಿವಿ (ಜಿಎಂಯು)ಯ 24ನೇ ವಾರ್ಷಿಕೋತ್ಸವದಲ್ಲಿ ಜಿಎಂಯುದ ವಿಕಸನ ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದ ಅವರು ‘ನಮ್ಮ ಈ ಪಯಣದುದ್ದಕ್ಕೂ ನಮಗೆ ಸರಕಾರದ ಅತ್ಯುತ್ತಮ ಬೆಂಬಲ ಲಭಿಸಿದೆ ’ ಎಂದರು.
ಜಿಎಂಯು ಚಾನ್ಸಲರ್ ಪ್ರೊ.ಹೊಸ್ಸಮ್ ಹಮ್ದಿ, ತುಂಬೆ ಗ್ರೂಪ್ ನ ಆರೋಗ್ಯ ರಕ್ಷಣೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ವಿವಿಯ ಕಾಲೇಜುಗಳ ಡೀನ್ ಗಳು,ಇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಎಂಯು ಸ್ಥಾಪನೆಯಾದಾಗಿನಿಂದ ಸುಮಾರು 2,000 ವೈದ್ಯರು ಇಲ್ಲಿಂದ ಹೊರಬಂದಿದ್ದು, ಮಧ್ಯ ಪ್ರಾಚ್ಯ, ಆಫ್ರಿಕಾ, ದಕ್ಷಿಣ ಏಷ್ಯಾ, ಯುರೋಪ್, ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಜಿಎಂಯು ವಿಶ್ವಾದ್ಯಂತ 70ಕ್ಕೂ ಅಧಿಕ ವಿವಿಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಭಾಗಿತ್ವವನ್ನು ಹೊಂದಿದೆ.