ಟರ್ಕಿ ನಗರಕ್ಕೆ ಅಪ್ಪಳಿಸಿದ ಸಿರಿಯಾದ ಕ್ಷಿಪಣಿ: 3 ಮಂದಿ ಮೃತ್ಯು

ಅಂಕಾರ, ನ.21: ಟರ್ಕಿಯ ಗಡಿಭಾಗದ ನಗರ ಕರ್ಕಾಮಿಸ್(Curcumin) ಗೆ ಸೋಮವಾರ ಸಿರಿಯಾದಿಂದ ಪ್ರಯೋಗಿಸಿದ ಕ್ಷಿಪಣಿಗಳು ಅಪ್ಪಳಿಸಿದ್ದು ಮಗುವಿನ ಸಹಿತ ಮೂವರು ಸಾವನ್ನಪ್ಪಿದ್ದು 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕ್ಷಿಪಣಿ ದಾಳಿಯಲ್ಲಿ ಒಂದು ಮಗುವಿನ ಸಹಿತ 3 ಮಂದಿ ಮೃತಪಟ್ಟಿದ್ದು 6 ಮಂದಿ ಗಾಯಗೊಂಡಿದ್ದಾರೆ. ಈ ಕೃತ್ಯಕ್ಕೆ ಪ್ರತೀಕಾರ ತೀರಿಸಲಿದ್ದೇವೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು (Suleiman Soylu)ಹೇಳಿದ್ದಾರೆ.
ಸಿರಿಯಾದ ಜರಬ್ಲಸ್ (Jarablus)ನಗರವನ್ನು ಕರ್ಕಾಮಿಸ್ ಗೆ ಸಂಪರ್ಕಿಸುವ ಗಡಿದಾಟುವಿನ ಸಮೀಪದ ಹೈಸ್ಕೂಲ್ ಹಾಗೂ ಅದರ ಬಳಿಯಿದ್ದ 2 ಮನೆಗಳಿಗೆ ಕ್ಷಿಪಣಿ ಅಪ್ಪಳಿಸಿದೆ. ಟ್ರಕ್ ಒಂದು ಬೆಂಕಿಯಲ್ಲಿ ಸುಟ್ಟುಹೋಗಿದೆ ಎಂದು ಆಗ್ನೇಯ ಪ್ರಾಂತದ ಗವರ್ನರ್ ದವೂತ್ ಗುಲ್ ಹೇಳಿದ್ದಾರೆ.
ರವಿವಾರ ಟರ್ಕಿಯು ಉತ್ತರ ಸಿರಿಯಾ ಹಾಗೂ ಇರಾಕ್ ನಲ್ಲಿರುವ ನಿಷೇಧಿತ ಕುರ್ದಿಷ್ ಉಗ್ರರ ನೆಲೆಯನ್ನು ಗುರಿಯಾಗಿಸಿ ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಸಿರಿಯಾ ನಡೆಸಿದ ದಾಳಿಯಲ್ಲಿ ಗಡಿದಾಟು ಬಳಿ ಕರ್ತವ್ಯದಲ್ಲಿದ್ದ 6 ಪೊಲೀಸರು ಹಾಗೂ ಇಬ್ಬರು ಯೋಧರು ಗಾಯಗೊಂಡಿದ್ದರು ಎಂದು ವರದಿಯಾಗಿದೆ.