ಚೀನಾದ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ : 36 ಮಂದಿ ಸಜೀವ ದಹನ
ಬೀಜಿಂಗ್ : ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ (Chinese city of Anyang in Henan) ನಗರದ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 36 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಅನ್ಯಾಂಗ್ ನಗರದ ವೆಂಗ್ಫೆಂಗ್ ಜಿಲ್ಲೆ ಅಥವಾ ಹೈಟೆಕ್ ಝೋನ್ನಲ್ಲಿ ಕಾರ್ಯ ನಿರ್ವಹಿಸುವ ಕೈಕ್ಸಿಂದಾ ಟ್ರೇಡಿಂಗ್ ಕಂಪನಿ ಲಿಮಿಟೆಡ್ನಲ್ಲಿ (Kaixinda Trading Co Ltd) ಈ ದುರಂತ ಸಂಭವಿಸಿದ್ದು, ಸೋಮವಾರ ಮಧ್ಯಾಹ್ನ ಆರಂಭವಾದ ಬೆಂಕಿಯನ್ನು ಶಮನಗೊಳಿಸಲು 63 ಅಗ್ನಿಶಾಮಕ ವಾಹನಗಳು ನಿರಂತರ ಕಾರ್ಯಾಚರಣೆ ನಡೆಸಿವೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.
ರಾತ್ರಿ 8ರ ಸುಮಾರಿಗೆ ಬೆಂಕಿ ನಿಯಂತ್ರಿಸಲಾಗಿದ್ದು, ರಾತ್ರಿ 11ರ ಸುಮಾರಿಗೆ ಸಂಪೂರ್ಣವಾಗಿ ನಂದಿಸಲಾಯಿತು. ಮಂಗಳವಾರ ಮುಂಜಾನೆ ವೇಳೆಗೆ 36 ಮಂದಿಯ ಮೃತದೇಹ ಪತ್ತೆಯಾಗಿವೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಸಿಟಿವಿ ವರದಿ ಮಾಡಿದೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿ ವಿವರಿಸಿದೆ.
ಮೃತರ ಕುಟುಂಬಕ್ಕೆ ಕೌನ್ಸಿಲಿಂಗ್ ನಡೆಸಲು ಮನಃಶಾಸ್ತ್ರಜ್ಞರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ. ಸಾರ್ವಜನಿಕ ಭದ್ರತಾ ಇಲಾಖೆ ಸೂಕ್ತ ಅಪರಾಧ ಶಂಕಿತರನ್ನು ನಿಯಂತ್ರಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.