ನೀರಿನ ಟ್ಯಾಂಕ್ ಗೋಮೂತ್ರದಿಂದ 'ಶುದ್ಧೀಕರಿಸಿದ' ಪ್ರಕರಣ: ಸಿಪಿಐ(ಎಂಎಲ್) ಲಿಬರೇಷನ್ ಖಂಡನೆ
ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದ ಕುಡಿವ ನೀರಿನ ಟ್ಯಾಂಕ್ನ ನಲ್ಲಿಯಿಂದ ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂಬ ಕಾರಣಕ್ಕೆ, ಸವರ್ಣೀಯನೆಂದು ಕರೆಸಿಕೊಳ್ಳುವ ಕೊಳಕು ಮನಸ್ಸಿನ ಮುಖಂಡನೊಬ್ಬ ಮಹಿಳೆಯನ್ನು ಅವಮಾನಿಸಿ, ನಂತರ ಟ್ಯಾಂಕ್ ಅನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ ಘಟನೆಯನ್ನು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಖಂಡಿಸಿದೆ.
''ದಲಿತ ಮಹಿಳೆ ಟ್ಯಾಂಕ್ನಿಂದ ನೀರು ಕುಡಿದರೆಂದು ಟ್ಯಾಂಕ್ ನ ನೀರನೆಲ್ಲಾ ಸಂಪೂರ್ಣವಾಗಿ ಖಾಲಿಮಾಡಿಸಿ ಅದನ್ನು ಗೋಮೂತ್ರದಿಂದ ಶುದ್ಧೀಕರಿಸಿರುವುದು ಇಡೀ ಮಾನವ ಕುಲವೇ ತಲೆತಗ್ಗಿಸುವ ಘಟನೆಯಾಗಿದೆ. ಕರ್ನಾಟಕದಲ್ಲಿ ಇನ್ನೂ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಈ ಘಟನೆ. ೭೫ ವರ್ಷಗಳ ನಂತರವೂ ಸ್ವತಂತ್ರ ಭಾರತ ತನ್ನ ಜಾತಿಯ ಊಳಿಗಮಾನ್ಯ ತಳಹದಿಯನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗು ಜಾತಿ ವಿನಾಶದ ಕಾರ್ಯಕ್ರಮವಂತೂ ಇಲ್ಲವೇ ಇಲ್ಲ'' ಎಂದು ಸಮಿತಿ ಆಕ್ರೋಸ ವ್ಯಕ್ತಪಡಿಸಿದೆ.
''ಸಂವಿಧಾನದ ನೈತಿಕತೆ ಹಾಗೂ ಸಮಾನತೆಯಲ್ಲಿ ನಂಬಿಕೆಯುಳ್ಳವರು ಚಾಮರಾಜನಗರ ಘಟನೆಯನ್ನು ಖಂಡಿಸಿ ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಮುಂದೆ ಬರಬೇಕು. ಜಾತಿ ಒಂದು ಅನ್ಯಾಯದ ವ್ಯವಸ್ಥೆ ಮತ್ತು ಅದರ ವಿರುದ್ಧ ದಮನಿತರ ಜತೆಗೂಡಿ ಎಲ್ಲರು ಸಹ ಹೋರಾಟಕ್ಕೆ ಇಳಿದಾಗ ಮಾತ್ರ ಈ ದೇಶದಲ್ಲಿ ಜಾತಿ ವಿನಾಶ ಸಾಧ್ಯ'' ಎಂದು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.