ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿರಬೇಕು: ಡಾ. ರಾಜೇಂದ್ರಕುಮಾರ್
ಉಪ್ಪಿನಂಗಡಿ: ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ

ಉಪ್ಪಿನಂಗಡಿ: ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗಳಾಗಿದ್ದರೂ ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಕೇವಲ 30 ಕೋಟಿಯಷ್ಟು ಜನರು ಮಾತ್ರ ಸಹಕಾರಿ ವ್ಯವಸ್ಥೆಗೆ ಒಳಗಾಗಿದ್ದಾರೆ. ಉಳಿದ ಬಹು ದೊಡ್ಡ ಭಾಗದ ಜನಕ್ಕೆ ಇನ್ನೂ ಸಹಕಾರಿ ತತ್ವ ತಲುಪಿಲ್ಲ. ಈ ದಿಶೆಯಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಯನ್ನೂ ಒಳಗೊಂಡಂತೆ ಸಹಕಾರಿ ಸಂಸ್ಥೆಗಳು ಬೆಳೆಯುವಂತೆ ಮಾಡುವುದೇ ಸಹಕಾರಿ ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಬಿರುದಾಂಕಿತ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ಆಯೋಜಿಸಲ್ಪಟ್ಟ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ರ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಸಂಘಗಳು 20 ವರ್ಷಗಳ ಹಿಂದೆಯೇ ಗಣಕೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಕೃಷಿ ಸಾಲ ಮರುಪಾವತಿಯಲ್ಲೂ ಶೇ. 100ರ ಪ್ರಗತಿಯನ್ನು ಸಾಧಿಸಿಕೊಂಡು ಬಂದಿದೆ. ದೇಶದ ವಾಣಿಜ್ಯ ಬ್ಯಾಂಕುಗಳು ಭಾಷೆ ತಿಳಿಯದ ಸಿಬ್ಬಂದಿಯನ್ನು ನೇಮಿಸುವ ಮೂಲಕ ಗ್ರಾಹಕರಿಂದ ವಿಮುಖವಾಗುತ್ತಿದ್ದರೆ, ಸಹಕಾರಿ ಸಂಸ್ಥೆಗಳು ಸ್ಥಳೀಯ ಸಿಬ್ಬಂದಿಯೊಂದಿಗೆ ಜನ ಸ್ನೇಹಿಯಾಗಿ ರೂಪುಗೊಳ್ಳುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಸಕ್ತ ಕೇಂದ್ರ ಸರಕಾರ ಸಹಕಾರ ಕ್ಷೇತ್ರವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಸಮರ್ಥ ಸಚಿವರ ನೇತೃತ್ವದಲ್ಲಿ ಸಹಕಾರ ಸಚಿವಾಲಯವನ್ನೇ ತೆರೆದಿದೆ. ರೈತರ ಆರೋಗ್ಯ ರಕ್ಷಣೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಯಶಸ್ವಿನಿ ಯೋಜನೆಯನ್ನು ಪುನಹ ಜಾರಿಗೊಳಿಸಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಹೈನುಗಾರರ ಉನ್ನತಿಗೆ ಯೋಜನೆ ರೂಪಿಸಲಾಗಿದೆ. ಒಟ್ಟಾರೆ ರೈತರ ಅನುಕೂಲತೆಗಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಹಕಾರ ತತ್ವದಡಿ ಅದೆಲ್ಲವೂ ರೈತರನ್ನು ತಲುಪಲಿದೆ ಎಂದರು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಜನತೆಗೆ ಉಳಿತಾಯದ ಮತ್ತು ಆರ್ಥಿಕ ಸಾಕ್ಷರತೆಯನ್ನು ಕಲಿಸಿಕೊಟ್ಟ ಸಹಕಾರ ಸಂಘಗಳೇ ಭಾರತದ ಶಕ್ತಿ ಕೇಂದ್ರಗಳಾಗಿದೆ ಎಂದರು.
ದ.ಕ ಜಿಲ್ಲಾ ಸಹಕಾರಿ ಯೂನಿಯ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರಂಜನ್ ಬಾವಂತಬೆಟ್ಟು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸಾವಿತ್ರಿ ರೈ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್, ಪುತ್ತೂರು ಟಿ.ಎ.ಪಿ.ಸಿ.ಎಂ.ಎನ್ ಅಧ್ಯಕ್ಷರಾದ ಕೃಷ್ಣ ಕುಮಾರ್ ರೈ, ಪುತ್ತೂರು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ ರೈ ಮೇನಾಲ, ರಾಜಶೇಖರ ಜೈನ್, ಉಪ್ಪಿನಂಗಡಿ ಸಿ.ಎ.ಬ್ಯಾಂಕ್‌ನ ಅಧ್ಯಕ್ಷ ಕೆ.ವಿ. ಪ್ರಸಾದ್, ಕಾರ್ಯ ನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣರಾದ ಸುರೇಶ್ ಕುಮಾರ್ ಸೊರಕೆ, ಪಂಜಿಗುಡ್ಡೆ ಈಶ್ವರ ಭಟ್, ಗಣೇಶ್ ನಿಡ್ವಣ್ಣಾಯ, ಮಹಮ್ಮದ್ ಅಲಿ, ರಮೇಶ್ ಕಲ್ಕುರೆ, ದಾಮೋದರ ಗುಂಡ್ಯ, ರಾಮಕೃಷ್ಣ ರೈ, ಎಂ.ಜಿ. ಭಟ್ ಮಧುವನ, ರಾಮಚಂದ್ರ ಮಣಿಯಾಣಿ, ಪೆಲಪ್ಪಾರು ವೆಂಕಟರಮಣ ಭಟ್, ವಿಜಯ ಕುಮಾರ್ ಕಲ್ಲಳಿಕೆ, ಅಜೀಜ್ ಬಸ್ತಿಕಾರ್, ಕರುಣಾಕರ ಸುವರ್ಣ, ಸುರೇಶ್ ಅತ್ರೆಮಜಲು, ಕೈಲಾರ್ ರಾಜಗೋಪಾಲ ಭಟ್, ಯಶವಂತ ಜಿ., ಜಗದೀಶ್ ರಾವ್ ಮಣಿಕ್ಕಳ, ರಾಜೇಶ್, ಯತೀಶ್ ಶೆಟ್ಟಿ, ರಾವ ನಾಯ್ಕ, ಶ್ಯಾಮಲಾ ಶೆಣೈ, ಸುಜಾತಾ ಆರ್. ರೈ, ದಯಾನಂದ ಸರೋಳಿ, ಕುಂಞಿ ಎನ್, ಸಚಿನ್ ಎಂ, ಶರತ್ , ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಉಮೇಶ್ ಶೆಣೈ, ಯು. ರಾಮ ಮೊದಲಾದವರು ಭಾಗವಹಿಸಿದ್ದರು.
ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಕೆ.ವಿ.ಪ್ರಸಾದ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸುನಿಲ್ ದಡ್ಡು ವಂದಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು.