ನ.27ರಂದು ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು, ನ.22: ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ನ. 27ರಂದು ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಶಿಬರೂರು ದೇಲಂತಬೆಟ್ಟು ಯುವಕ ಮಂಡಲದ ಪದ್ಮಾವತಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ವೈ. ನಾಯಕ್, ಸ್ಪರ್ಧೆಯಲ್ಲಿ 15ರಿಂದ 29 ವರ್ಷದವರು ಭಾಗವಹಿಸಬಹುದಾಗಿದೆ. ಜನ್ಮ ದಿನಾಂಕ ದೃಢೀಕರಣದೊಂದಿಗೆ ದ.ಕ ಜಿಲ್ಲೆಯವರಿಗೆ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.
ಸ್ಪರ್ಧೆಯು ಗುಂಪು ವಿಭಾಗದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ ಇದರಲ್ಲಿ ನಾಲ್ಕರಿಂದ 8 ಮಂದಿ ಭಾಗವಹಿಸಬಹುದು. ಸ್ಪರ್ಧೆಯ ಅವಧಿ 10 ನಿಮಿಷವಾಗಿರುತ್ತದೆ. ವೈಯಕ್ತಿಕ ವಿಭಾಗದಲ್ಲಿ ಏಕಾಂಕ ನಾಟಕ, ಶಾಸ್ತ್ರೀಯ ಗಾಯನ (ಕರ್ನಾಟಕ, ಹಿಂದೂಸ್ತಾನಿ), ಶಾಸ್ತ್ರೀಯ ವಾದ್ಯಗಳು (ಸಿತಾರ್, ಕೊಳಲು, ವೀಣೆ, ತಬಲಾ, ಮೃದಂಗ), ಶಾಸ್ತ್ರೀಯ ನೃತ್ಯ (ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್), ಹಾಮೋನಿಯಂ, ಗಿಟಾರ್, ಆಶುಭಾಷಣ ಸ್ಪರ್ಧೆ ನಡೆಯಯಲಿದೆ.
ಭಾಗವಹಿಸುವವರಿಗೆ ಪ್ರಯಾಣ ಭತ್ತೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹಾಗಾಗಿ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಸ್ಪರ್ಧಿಗಳು ಹೊಂದಿರಬೇಕು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಧಾಕರ ಅಮೀನ್, ದೇಲಂತಬೆಟ್ಟು ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ, ಗೌರವಾಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯ ಪ್ರಸಾದ್ ಉಪಸಿಸ್ಥತರಿದ್ದರು.