ಸರಕಾರ ಸಾಧನೆ ಹೇಳದಿದ್ದರೆ ಕಾಂಗ್ರೆಸ್‌ನ ಸುಳ್ಳೇ ವಿಜೃಂಭಿಸಲಿದೆ: ಸಂಸದ ತೇಜಸ್ವಿ ಸೂರ್ಯ
ಯುವ ಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟನೆ

ಉಡುಪಿ, ನ.22: ನಮ್ಮ ಸರಕಾರಗಳು, ಆಡಳಿತ, ಪಕ್ಷಗಳ ಬಗ್ಗೆ ಕಾಂಗ್ರೆಸ್ ಪುಂಖಾನುಪುಂಖವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಪೇ ಸಿಎಂ, ಶೇ.40 ಕಮಿಷನ್ ಎಂಬ ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುತ್ತಿದೆ. ಇದಕ್ಕೆ ವಿರುದ್ಧವಾಗಿ ನಾವು ನಮ್ಮ ಸರಕಾರಗಳ ಯೋಜನೆಗಳನ್ನು ಜನರಿಗೆ ತಿಳಿಸಬೇಕಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್‌ನವರ ಸುಳ್ಳು ಆರೋಪಗಳೇ ಸತ್ಯ ಎಂದು ಜನ ನಂಬುತ್ತಾರೆ ಎಂದು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಮಂಗಳವಾರ ನಡೆದ ಯುವ ಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಡಬಲ್ ಎಂಜಿನ್ ಸರಕಾರ ಇದ್ದರೆ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ. ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಮೋದಿ ಜಾರಿಗೆ ತಂದಿರುವ ಯಾವುದೇ ಜನಪರ ಯೋಜನೆಗಳು ಕಟ್ಟಕಡೆಯ ಜನರಿಗೆ ತಲುಪಿಲ್ಲ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಜನರಿಗೆ ಡಬಲ್ ಇಂಜಿನ್ ಸರಕಾರದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಗುಜರಾತ್ ಚುನಾಚಣೆಯಲ್ಲಿ ಬಿಜೆಪಿ 130-140 ಸೀಟು ಗೆಲ್ಲಲಿದೆ. ಆಮ್ ಆದ್ಮಿ ಪಕ್ಷ ಗುಜರಾತಿನ 182 ಕ್ಷೇತ್ರದಲ್ಲೂ ಠೇವಣಿ ಕಳೆದುಕೊಳ್ಳಲಿದೆ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಸರಕಾರ ರಚಿಸಲಿದೆ. ಈ ಎರಡು ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಶಸ್ತ್ರಾಸ್ತ್ರ ತ್ಯಾಗ ಮಾಡಿದೆ. ರಾಹುಲ್ ಗಾಂಧಿ ಸಂಪೂರ್ಣ ಶರಣಾಗಿ ವಾಕಿಂಗ್ ಮಾಡುತ್ತಿದ್ದಾರೆ. ಕರ್ನಾಟಕದ ಚುನಾವಣಾ ರಣರಂಗದಲ್ಲಿಯೂ ಕಾಂಗ್ರೆಸ್ ಶಸ್ತ್ರಾಸ್ತ್ರ ತ್ಯಾಗ ಮಾಡಲಿದೆ ಎಂದರು.
ರಾಜ್ಯ ಯುವ ಮೋರ್ಚಾ ಪ್ರಭಾರಿ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಾಸಕ ಕೆ.ರಘುಪತಿ ಭಟ್ ಮಾತ ನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಹರ್ಷಿತ್ ವೆಂಕಟೇಶ್ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನಾ ಉಡುಪಿಯ ಜೋಡುಕಟ್ಟೆಯಲ್ಲಿ ಬೈಕ್ ರ‍್ಯಾಲಿಗೆ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಅಲ್ಲಿಂದ ಹೊರಟ ರ‍್ಯಾಲಿ ಮಣಿಪಾಲದ ರಜತಾದ್ರಿಯಲ್ಲಿ ಸಮಾಪ್ತಿಗೊಂಡಿತು. ಬಳಿಕ ರಜತಾದ್ರಿ ಮುಂಭಾಗದಲ್ಲಿರುವ ಡಾ.ವಿ.ಎಸ್.ಆಚಾರ್ಯರವರ ಪುತ್ಥಳಿಗೆ ಮಾಲಾರ್ಪಣೆಗೈದು ಸಭಾಂಗಣದ ವರೆಗೆ ಕಾಲ್ನಡಿಗೆ ಜಾಥ ನಡೆಸಲಾಯಿತು.







