"1998ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ ವಕೀಲರ ಬಂಧನ ಯಾಕಿಲ್ಲ"
ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಪ್ರಶ್ನೆ

ಮಂಗಳೂರು, ನ.22: ಖಾಸಗಿ ನ್ಯೂಸ್ ಚಾನೆಲ್‌ವೊಂದು ನಡೆಸಿದ ಚರ್ಚೆಯಲ್ಲಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ‘1998ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ನಗರದ ವಕೀಲರು ಆಶ್ರಯ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅಂದಿನ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಜಯಂತ್ ಶೆಟ್ಟಿ ಯಾಕೆ ಆ ವಕೀಲರನ್ನು ಬಂಧಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಪ್ರಶ್ನಿಸಿದ್ದಾರೆ.
ಕೊಯಮುತ್ತೂರಿನಲ್ಲಿ 1998ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 60 ಮಂದಿ ಸಾವಿಗೀಡಾಗಿದ್ದರು. ಬಾಂಬ್ ಸ್ಫೋಟಿಸಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರಿನ ಹೊರವಲಯದಲ್ಲಿ ಬಂಧಿಸಲಾಗಿತ್ತು. ಅವರಿಗೆ ನಗರದ ವಕೀಲರು ಮನೆಯೊಂದರಲ್ಲಿ ಆಶ್ರಯ ನೀಡಿದ್ದರು. ಅದಲ್ಲದೆ ಈ ಚರ್ಚೆಯಲ್ಲಿ ಪಾಲ್ಗೊಂಡ ಇನ್ನೊಬ್ಬ ಅತಿಥಿಯು ಕೊಯಮುತ್ತೂರು ಸ್ಫೋಟ ಮತ್ತು ನಾಗುರಿಯಲ್ಲಿ ಮೊನ್ನೆ ನಡೆದ ಸ್ಫೋಟಕ್ಕೆ ಸಾಮ್ಯತೆ ಇದೆ ಎನ್ನುತ್ತಾರೆ. ಆ ಪ್ರಕರಣದಲ್ಲಿ ಬಾಂಬ್ ತಯಾರಿಸಿದ್ದು ಕೂಡ ಮಗಳೂರಿನಲ್ಲಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಇದು ಬಹಳ ಗಂಭೀರ ವಿಚಾರವಾಗಿದೆ ಎಂದು ದಿನೇಶ್ ಹೆಗ್ಡೆ ಉಳೆಪ್ಪಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಯಮುತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಘಟನೆಯ ಪೂರ್ವ ಮತ್ತು ನಂತರ ಉಗ್ರರಿಗೆ ಆಶ್ರಯ ನೀಡಿದ್ದ ಮಂಗಳೂರಿನ ವಕೀಲರು ಯಾರು? ಆವಾಗ ಉನ್ನತ ಅಧಿಕಾರಿಯಾಗಿದ್ದ ಜಯಂತ್ ಶೆಟ್ಟಿ ಅಂದು ಯಾಕೆ ಆ ವಕೀಲರನ್ನು ಬಂಧಿಸಿಲ್ಲ? ಪೊಲೀಸರು ಈ ವಕೀಲರೊಂದಿಗೆ ಕೈ ಜೋಡಿಸಿಕೊಂಡಿದ್ದರೇ? ಎಂದು ಪ್ರಶ್ನಿಸಿದ್ದಾರೆ.
ನಾಗುರಿಯ ಸ್ಫೋಟ ಪ್ರಕರಣದಲ್ಲೂ ಆ ವಕೀಲರ ಕೈವಾಡ ಇದ್ದೀರಬಹುದೇ ಎಂಬ ಸಂಶಯ ಕಾಡುತ್ತಿದೆ. ಹಾಗಾಗಿ ಜಯಂತ್ ಶೆಟ್ಟಿ ಆ ವಕೀಲರ ಹೆಸರನ್ನು ಪ್ರಸ್ತುತ ತನಿಖೆ ಮಾಡುತ್ತಿರುವ ಪೊಲೀಸರಿಗೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಅಂತಹ ವಕೀಲರು ನ್ಯಾಯಾಲಯದಲ್ಲಿ ಕೆಲಸ ಮಾಡಲು ಮತ್ತು ವಕೀಲರಾಗಿ ಮುಂದುವರಿಯಲು ಅನರ್ಹರು ಎಂದು ದಿನೇಶ್ ಹೆಗ್ಡೆ ಉಳೆಪ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.