ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ. ಸಂಜೀವ ಗಟ್ಟಿ ನಿಧನ

ಕೊಣಾಜೆ: ಕಾಂಗ್ರೆಸ್‌ನ ಹಿರಿಯ ಮುಖಂಡ ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸಂಜೀವ ಗಟ್ಟಿ (82) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮಧ್ಯಾಹ್ನ ಕೈರಂಗಳ ಧರ್ಮಕ್ಕಿಯ ಸ್ವಗೃಹದಲ್ಲಿ ನಿಧನರಾದರು.
ಕೈರಂಗಳ ಹಾಗೂ ನರಿಂಗಾನ ಗ್ರಾಮದಲ್ಲಿ ಶಾಲೆಗಳ ಮಂಜೂರಾತಿ ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದ ಅವರು
ಪಕ್ಷದಲ್ಲಿ ಸುಮಾರು ಐದು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದು, ಐದು ಬಾರಿ ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ
ಐದು ಬಾರಿ ನಿರ್ದೇಶಕರಾಗಿ, ಎರಡು ಬಾರಿ ಅಧ್ಯಕ್ಷರಾಗಿ, ಬಿ.ಸಿ. ರೋಡ್ ನ ಎಲ್ ಡಿ ಬ್ಯಾಂಕ್ ನ ನಿರ್ದೇಶಕರಾಗಿ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಆಗಿ, ಕೃಷಿ ಬ್ಯಾಂಕ್ ನಿರ್ದೇಶಕರಾಗಿ, ಡಿಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.
ಅವರ ನಿಧನಕ್ಕೆ ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಈಶ್ವರ್ ಉಳ್ಳಾಲ್, ಇಬ್ರಾಹಿಂ ಕೋಡಿಜಾಲ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಮೊಹಮ್ಮದ್ ಮೋನು, ಪಕ್ಷದ ಮುಖಂಡರಾದ ಅಬ್ದುಲ್ ಜಲೀಲ್, ದೇವದಾಸ್ ಭಂಡಾರಿ, ನಾಸಿರ್ ನಡುಪದವು, ಅಬ್ದುಲ್ ರಝಾಕ್ ಕುಕ್ಕಾಜೆ, ಗಣೇಶ್ ನಾಯ್ಕ್, ಸೀತಾರಾಮ ಶೆಟ್ಟಿ ಫಜೀರು ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.