ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ತನ್ನ ಸಂಗಾತಿ ಅಥವಾ ಕುಟುಂಬಸ್ಥರಿಂದ ಕೊಲೆಗೀಡಾಗುತ್ತಿದ್ದಾಳೆ: ಆಂಟೋನಿಯೊ ಗುಟೆರಸ್

ಹೊಸದಿಲ್ಲಿ: ಶ್ರದ್ಧಾ ಕೊಲೆ ಪ್ರಕರಣವು ಭಾರತದಲ್ಲಿ ಚರ್ಚೆಯಲ್ಲಿರುವ ನಡುವೆಯೇ, ಸಂಗಾತಿ, ಗೆಳೆಯ ಅಥವಾ ಪತಿ ಅಥವಾ ಕುಟುಂಬಸ್ಥರಿಂದಲೇ ಮಹಿಳೆಯರು ಹತ್ಯೆಗೊಳಗಾದ ಹಲವು ಪ್ರಕರಣಗಳು ವರದಿಯಾಗತೊಡಗಿವೆ. ಇದರ ಬೆನ್ನಲ್ಲೇ, ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ತನ್ನ ಸಂಗಾತಿ ಅಥವಾ ಆಪ್ತರಿಂದಲೇ ಕೊಲೆಯಾಗುತ್ತಾಳೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಅಥವಾ ಹುಡುಗಿಯರನ್ನು ಕೊಲ್ಲುವುದು ಸಂಗಾತಿಯೋ ಅಥವಾ ಕುಟುಂಬದ ಸದಸ್ಯರೋ ಆಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಮೇಲಿನ ಇಂತಹ ದೌರ್ಜನ್ಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಇದಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಆಂಟೋನಿಯೊ ಗುಟೆರಸ್ ಅವರು ನವೆಂಬರ್ 25 ರಂದು ನಡೆಯಲಿರುವ 'ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ' ದಿನಾಚರಣೆಗೆ ಮುನ್ನ ಈ ಹೇಳಿಕೆ ನೀಡಿದ್ದಾರೆ.
ಆನ್‌ಲೈನ್ ಕಿರುಕುಳಕ್ಕೆ ಮಹಿಳೆಯರೂ ಬಲಿಯಾಗುತ್ತಿದ್ದಾರೆ ಎಂದು ಹೇಳದದಾರೆ. ದ್ವೇಷ ಭಾಷಣ, ಅಶ್ಲೀಲ ಚಿತ್ರಗಳು, ಲೈಂಗಿಕ ಕಿರುಕುಳ ಮತ್ತು ಛಾಯಾಚಿತ್ರಗಳನ್ನು ವಿರೂಪಗೊಳಿಸುವಂತಹ ಮಹಿಳೆಯರ ವಿರುದ್ಧದ ಅಪರಾಧಗಳು ಸಾಮಾನ್ಯವಾಗಿದೆ. ಇಂತಹ ಅಪರಾಧಗಳಿಂದಾಗಿ ಮಹಿಳೆಯರು ಮತ್ತು ಹುಡುಗಿಯರ ಜೀವನ ಸೀಮಿತವಾಗಿದೆ ಮತ್ತು ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸಲಾಗಿದೆ ಎಂದು ಗುಟೆರಸ್ ಹೇಳಿದರು.
ಮಹಿಳೆಯರು ಮತ್ತು ಹುಡುಗಿಯರ ವಿರುದ್ಧದ ಅಪರಾಧಗಳನ್ನು ಕೊನೆಗೊಳಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಂಟೋನಿಯೊ ಗುಟೆರೆಸ್ ವಿಶ್ವದಾದ್ಯಂತ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಸಮಾಜದಿಂದ ನಾಗರಿಕ ಸಮಾಜ ಗುಂಪುಗಳ ನೆರವು ಪಡೆದು ರಾಷ್ಟ್ರೀಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಜತೆಗೆ ಮಹಿಳೆಯರ ಹಿತದೃಷ್ಟಿಯಿಂದ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ಹೆಚ್ಚಿಸುವ ಅಗತ್ಯವಿದೆ ಎಂದರು.