ಪ್ರತೀ 11 ನಿಮಿಷಗಳಿಗೊಮ್ಮೆ ನಿಕಟ ಸಂಗಾತಿಯಿಂದ ಮಹಿಳೆ ಹತ್ಯೆಗೊಳಗಾಗುತ್ತಾಳೆ: ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ, ನ.22: ನಿಕಟ ಸಂಗಾತಿ ಅಥವಾ ಕುಟುಂಬದ ಸದಸ್ಯರಿಂದ ಪ್ರತೀ 11 ನಿಮಿಷಗಳಿಗೊಮ್ಮೆ ಮಹಿಳೆ ಅಥವಾ ಹುಡುಗಿ ಕೊಲ್ಲಲ್ಪಡುತ್ತಾರೆ ಎಂದು ಪ್ರತಿಪಾದಿಸಿರುವ ವಿಶ್ವಸಂಸ್ಥೆ ಮುಖ್ಯಸ್ಥ ಅಂತೋನಿಯೊ ಗುಟೆರಸ್(Antonio Guterres), ಮಹಿಳೆಯರ ವಿರುದ್ಧದ ಹಿಂಸಾಚಾರವು ವಿಶ್ವದ ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಈ ಪಿಡುಗನ್ನು ನಿಭಾಯಿಸುವ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಅನುಷ್ಟಾನಗೊಳಿಸುವಂತೆ ಸರಕಾರಗಳಿಗೆ ಕರೆ ನೀಡಿದ್ದಾರೆ. ನವೆಂಬರ್ 25ರಂದು ಆಚರಿಸಲಾಗುವ `ಮಹಿಳೆಯರ ವಿರುದ್ಧ ಹಿಂಸಾಚಾರ ನಿರ್ಮೂಲನೆಗಾಗಿ'(``For the Elimination of Violence Against Women'') ಅಂತರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಗುಟೆರಸ್ ಈ ಹೇಳಿಕೆ ನೀಡಿದ್ದಾರೆ.
`ಮಹಿಳೆಯರು ಮತ್ತು ಹುಡುಗಿಯರ ವಿರುದ್ಧದ ಹಿಂಸೆಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕ ಪ್ರಕ್ಷುಬ್ಧತೆಯವರೆಗೆ ಇತರ ಹಲವು ಒತ್ತಡಗಳು ಅನಿವಾರ್ಯವಾಗಿ ಇನ್ನಷ್ಟು ದೈಹಿಕ ಮತ್ತು ಮಾನಸಿಕ ನಿಂದನೆಗೆ ಕಾರಣವಾಗುತ್ತದೆ. ಜತೆಗೆ, ಸ್ತ್ರೀದ್ವೇಷದ ದ್ವೇಷ ಭಾಷಣ, ಲೈಂಗಿಕ ಕಿರುಕುಳ, ವ್ಯಕ್ತಿತ್ವವನ್ನು ನಿಂದಿಸುವುದು ಇತ್ಯಾದಿ ಅತಿರೇಕದ ಆನ್ಲೈನ್ ಹಿಂಸಾಚಾರವನ್ನು ಮಹಿಳೆಯರು ಮತ್ತು ಹುಡುಗಿಯರು ಎದುರಿಸುತ್ತಾರೆ. ಮನುಕುಲದ ಅರ್ಧದಷ್ಟನ್ನು ಗುರಿಯಾಗಿಸಿಕೊಂಡ ಈ ತಾರತಮ್ಯ, ಹಿಂಸೆ ಮತ್ತು ನಿಂದನೆ ಅತ್ಯಧಿಕ ಮಟ್ಟಕ್ಕೇರಿದೆ. ಇದು ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತದೆ, ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನಿರಾಕರಿಸುತ್ತದೆ ಮತ್ತು ನಮ್ಮ ಜಗತ್ತಿಗೆ ಅಗತ್ಯವಿರುವ ಸಮಾನ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ' ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸುವ ಪರಿವರ್ತನಾ ಕ್ರಮದ ಸಮಯ ಇದೀಗ ಬಂದಿದೆ. ಸರಕಾರಗಳು ಈ ಪಿಡುಗನ್ನು ನಿಭಾಯಿಸಲು ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರೂಪಿಸಿ, ಅದಕ್ಕೆ ಅನುದಾನ ಒದಗಿಸಿ ಅನುಷ್ಟಾನಗೊಳಿಸಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರತೀ ಹಂತದ ಪ್ರಕ್ರಿಯೆಯೂ ತಳ-ಮೂಲ ಮತ್ತು ನಾಗರಿಕ ಸಮಾಜದ ಗುಂಪುಗಳನ್ನು ಒಳಗೊಂಡಿರಬೇಕು ಮತ್ತು ಎಲ್ಲಾ ಕಾನೂನುಗಳೂ ಜಾರಿಯಾಗಿವೆ ಹಾಗೂ ಅವನ್ನು ಪಾಲಿಸಲಾಗುತ್ತದೆ ಎಂದು ಖಾತರಿ ಪಡಿಸಬೇಕು.
ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳಿಗೆ ಹಾಗೂ ಚಳವಳಿಗಳಿಗೆ 2026ರ ಒಳಗೆ ಅನುದಾನವನ್ನು 50%ದಷ್ಟು ಹೆಚ್ಚಿಸಬೇಕು ಎಂದು ಕರೆ ನೀಡಿದ ಅವರು, ಮಹಿಳೆಯರ ಹಕ್ಕುಗಳ ಪರವಾಗಿ ನಿಲ್ಲಲು ಮತ್ತು ಧ್ವನಿಯೆತ್ತಲು, ನಾವೆಲ್ಲಾ ಸ್ತ್ರೀವಾದಿಗಳು ಎಂದು ಘೋಷಿಸಬೇಕೆಂದು ಆಗ್ರಹಿಸಿದರು.
ಈ ವರ್ಷದ ಅಂತರಾಷ್ಟ್ರೀಯ ದಿನದ ವಿಷಯ ` ಒಗ್ಗೂಡಿ: ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಕ್ರಿಯಾಶೀಲರಾಗಿರಿ' ಎಂದಾಗಿದ್ದು ಇದರರ್ಥ ಬದಲಾವಣೆಗೆ ಕರೆ ನೀಡುವ ಮತ್ತು ಹಿಂಸೆಯಿಂದ ಬದುಕುಳಿದವರನ್ನು ಬೆಂಬಲಿಸುವ ವಿಶ್ವದಾದ್ಯಂತದ ಕಾರ್ಯಕರ್ತರ ಜತೆ ಕೈಜೋಡಿಸುವುದಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ಲಿಂಗ ಆಧರಿತ ಹಿಂಸೆಯು ಜಾಗತಿಕ ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಬಹುದೊಡ್ಡ ತೊಡಕಾಗಲಿದೆ ಎಂದು ಸೆಪ್ಟಂಬರ್ ನಲ್ಲಿ ವಿಶ್ವಸಂಸ್ಥೆಯ ಮಹಿಳೆ ಮತ್ತು ಆರ್ಥಿಕ, ಸಾಮಾಜಿಕ ವ್ಯವಹಾರಗಳ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 15-49 ವಯಸ್ಸಿನ ಪ್ರತೀ 10 ಮಹಿಳೆಯರು ಮತ್ತು ಹುಡುಗಿಯರಲ್ಲಿ ಒಬ್ಬರು ಹಿಂದಿನ ವರ್ಷದಲ್ಲಿ ನಿಕಟ ಸಂಗಾತಿಗಳಿಂದ ಲೈಂಗಿಕ ಅಥವಾ ದೈಹಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಲಿಂಗ ಅಂತರ ಸೂಚ್ಯಂಕ 2022ರಲ್ಲಿ ಉಲ್ಲೇಖಿಸಲಾಗಿದೆ.