ಚೀನಾದ ಫ್ಯಾಕ್ಟರಿಯಲ್ಲಿ ಬೆಂಕಿದುರಂತ: 38 ಮಂದಿ ಮೃತ್ಯು; ಇಬ್ಬರಿಗೆ ಗಾಯ

ಬೀಜಿಂಗ್, ನ.22: ಚೀನಾದ ಹೆನಾನ್ ಪ್ರಾಂತದ ಅನ್ಯಾಂಗ್ ನಗರದ ಫ್ಯಾಕ್ಟರಿಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 38 ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ `ಕ್ಸಿನ್ಹುವಾ' (Xinhua)ಸುದ್ಧಿಸಂಸ್ಥೆ ವರದಿ ಮಾಡಿದೆ.
ಫ್ಯಾಕ್ಟರಿಯಲ್ಲಿ ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸಿ ಇಲೆಕ್ಟ್ರಿಕ್ ವೆಲ್ಡಿಂಗ್(Electric welding) ಕಾರ್ಯ ನಡೆಸಿದ್ದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯುಂದ ತಿಳಿದು ಬಂದಿದೆ. ಬೆಂಕಿ ದುರಂತಕ್ಕೆ ಸಂಬಂಧಿಸಿ ಶಂಕಿತ ಕ್ರಿಮಿನಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿ ದುರಂತದ ಬಗ್ಗೆ ಮಾಹಿತಿ ತಿಳಿದೊಡನೆ ನಗರಪಾಲಿಕೆಯ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಬೆಂಕಿಯನ್ನು ರಾತ್ರಿ 11 ಗಂಟೆಯ ವೇಳೆಗೆ ನಿಯಂತ್ರಿಸಲಾಗಿದೆ ಎಂದು ಸಿಸಿಟಿವಿ ವರದಿ ಮಾಡಿದೆ. ಬೆಂಕಿ ಕ್ಷಣಮಾತ್ರಕ್ಕೆ ಸಂಪೂರ್ಣ ಫ್ಯಾಕ್ಟರಿಯನ್ನು ವ್ಯಾಪಿಸಿದ್ದು 38 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.