ಉಡುಪಿ: ಡಿ.9, 10ಕ್ಕೆ ದಕ್ಷಿಣ ಭಾರತ ಮುಕ್ತ ಮಾಸ್ಟರ್ ಅಥ್ಲೆಟಿಕ್ಸ್

ಉಡುಪಿ, ನ.22: ಉಡುಪಿ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ದಕ್ಷಿಣ ಭಾರತ ಮಟ್ಟದ ಪ್ರಥಮ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಡಿಸೆಂಬರ್ 9 ಮತ್ತು 10ರಂದು ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 30 ವರ್ಷದಿಂದ 80 ವರ್ಷದೊಳಗಿನ ಎಲ್ಲಾ ಕ್ರೀಡಾಸಕ್ತರು ತಮ್ಮ ತಮ್ಮ ವಿಭಾಗಗಳಲ್ಲಿ ಟ್ರ್ಯಾಕ್ ಹಾಗೂ ಫೀಲ್ಡ್ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಪ್ರತಿ ಐದು ವರ್ಷಗಳ ಅಂತರದಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ವಿಭಾಗ ಗಳಿದ್ದು, ಆಯಾ ವಯೋವರ್ಗದವರು ಅವರವರ ವಿಭಾಗದಲ್ಲಿ ಸ್ಪರ್ಧಿಸ ಬಹುದಾಗಿದೆ. ದಕ್ಷಿಣ ಭಾರತ ಮಟ್ಟದಲ್ಲಿ ಮೊದಲ ಬಾರಿಗೆ ನಡೆಯುವ ಈ ಕ್ರೀಡಾಕೂಟದಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ಆರು ರಾಜ್ಯಗಳ 700ಕ್ಕೂ ಅಧಿಕ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ ಎಂದು ಸುರೇಂದ್ರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಚೇರ್ಕಾಡಿ, ಉಪಾಧ್ಯಕ್ಷ ಕೆ.ಸುರೇಂದ್ರ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಅನ್ವರ್ ಕಟಪಾಡಿ ಹಾಗೂ ಸಂಜೀವ ಬಳ್ಕೂರು ಉಪಸ್ಥಿತರಿದ್ದರು.







