ಮಂಗಳೂರು: ಹಣತೆ ವ್ಯಾಪಾರಿಯ ಕೊಲೆ; ಆರೋಪಿಗೆ ಪೊಲೀಸ್ ಕಸ್ಟಡಿ

ಮಂಗಳೂರು, ನ. 22: ತಮಿಳುನಾಡಿನ ಸೇಲಂ ನಿವಾಸಿ, ಹಣತೆ ವ್ಯಾಪಾರಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣಸಾಸೆಗಾಗಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಹೂವಿನ ಹಡಗಲಿಯ ರವಿ ಯಾನೆ ವಕೀಲ್ ನಾಯ್ಕ್ (42)ನನ್ನು ಹೆಚ್ಚಿನ ವಿಚಾರಣೆಗೆ ನ.30ರವರೆಗೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಮಾಯಾವೇಳ್ ಮತ್ತವರ ಪತ್ನಿ ನಗರದ ಕುದ್ರೋಳಿಯ ಅಳಕೆ ಮಾರ್ಕೆಟ್ ಬಳಿ ಮಣ್ಣಿನ ದೀಪಗಳನ್ನು ಹಾಗೂ ಭವಂತಿ ಸ್ಟ್ರೀಟ್‌ನಲ್ಲಿ ಬೀದಿಬದಿ ತರಕಾರಿಯನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಆರೋಪಿ ಹಲವು ಬಾರಿ ಮಾಯಾವೇಳ್‌ರಿಂದ ಹಣತೆಗಳನ್ನು ಖರೀದಿಸಿದ್ದ. ರಖಂ ವ್ಯಾಪಾರಿಯಾದ ಮಾಯಾವೇಳ್ ಬಳಿ ಸಾಕಷ್ಟು ಹಣವಿರಬಹುದು ಎಂದು ಭಾವಿಸಿದ ಆರೋಪಿಯು ಮಾಯಾವೇಳ್‌ಗೆ ಮದ್ಯ ಕುಡಿಸಿ 200 ಹಣತೆ ಬೇಕೆಂದು ಹೇಳಿ ವ್ಯವಹಾರದ ನೆಪದಲ್ಲಿ ಕೂಳೂರಿನ ಮೈದಾನಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಮಾಯಾವೇಳ್ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವಿವಾರ ಕೂಳೂರು ಮೈದಾನದಲ್ಲಿ ಮೂಳೆಗಳು, ತಲೆಬುರುಡೆ ಇತ್ಯಾದಿ ಸಿಕ್ಕಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರು ಮಾಹಿತಿ ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಆರೋಪಿಯನ್ನು ಸೋಮವಾರ ಬಂಧಿಸಿತ್ತು.