ಶ್ರದ್ಧಾ ಹತ್ಯೆ ಪ್ರಕರಣ: ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದೆ: ಕೋರ್ಟಿನಲ್ಲಿ ಒಪ್ಪಿಕೊಂಡ ಅಫ್ತಾಬ್

ಹೊಸದಿಲ್ಲಿ,ನ.22: ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲ್ಕರ್(Shraddha Walker) (27) ಹತ್ಯೆಗೈದು ಶರೀರವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆರೋಪಿ ಅಫ್ತಾಬ್ ಅಮೀನ್ (Aftab Amin)ಪೂನಾವಾಲಾ ಸಿಟ್ಟಿನ ಭರದಲ್ಲಿ ತಾನು ಅಪರಾಧವನ್ನು ಮಾಡಿದ್ದಾಗಿ ಮಂಗಳವಾರ ದಿಲ್ಲಿಯ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ.
ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಫ್ತಾಬ್ ನನ್ನು ಮಹಾನಗರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಆತನ ಕಸ್ಟಡಿ ಅವಧಿಯನ್ನು ಇನ್ನೂ ನಾಲ್ಕು ದಿನಗಳಿಗೆ ವಿಸ್ತರಿಸಿದ ನ್ಯಾ.ಅವಿರಳ ಶುಕ್ಲಾ ಅವರು,ಆತನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಪೊಲೀಸರಿಗೆ ಅನುಮತಿ ನೀಡಿದರು.
ತಾನು ಸಿಟ್ಟಿನ ಭರದಲ್ಲಿ ಕೊಲೆಯನ್ನು ಮಾಡಿದ್ದೇನೆ ಮತ್ತು ಪೊಲೀಸರ ತನಿಖೆಯಲ್ಲಿ ಸಹಕರಿಸುತ್ತಿದ್ದೇನೆ ಎಂದು ಅಫ್ತಾಬ್ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಆತನ ವಕೀಲರು ಹೇಳಿದರು.
ತನಗೆ ದಿಲ್ಲಿಯ ಪ್ರದೇಶಗಳು ಅಷ್ಟಾಗಿ ಪರಿಚಯವಿಲ್ಲ,ಹೀಗಾಗಿ ಶ್ರದ್ಧಾಳ ಶರೀರದ ತುಂಡುಗಳನ್ನು ಎಸೆದ ಸ್ಥಳಗಳನ್ನು ನಿಖರವಾಗಿ ಗುರುತಿಸಲು ಕಷ್ಟವಾಗುತ್ತಿದೆ ಎಂದು ಅಫ್ತಾಬ್ ಹೇಳಿದ್ದಾನೆ ಎಂದೂ ವಕೀಲರು ತಿಳಿಸಿದರು.
ಪೊಲೀಸರು ಶವದ ಭಾಗಗಳನ್ನು ಪತ್ತೆ ಹಚ್ಚಲು ಅಫ್ತಾಬ್ನನ್ನು ಮೆಹ್ರೌಲಿ ಅರಣ್ಯ ಮತ್ತು ಇಲ್ಲಿಯ ಮೈದಾನಗಡಿಯಲ್ಲಿನ ಎರಡು ಕೊಳಗಳ ಬಳಿ ಕರೆದೊಯ್ಯಲಿದ್ದಾರೆ. ಅಫ್ತಾಬ್ ಶರೀರದ ಭಾಗಗಳನ್ನು ಎಸೆದಿದ್ದಾನೆ ಎನ್ನಲಾಗಿರುವ ಕೊಳವೊಂದರ ರೇಖಾಚಿತ್ರವನ್ನೂ ಆತ ಪೊಲೀಸರಿಗೆ ಒದಗಿಸಿದ್ದಾನೆ ಎಂದು ವಕೀಲರು ತಿಳಿಸಿದರು.
ದಕ್ಷಿಣ ದಿಲ್ಲಿಯ ತನ್ನ ಫ್ಲ್ಯಾಟ್ ನಲ್ಲಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದ ಅಫ್ತಾಬ್ ಶರೀರವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್ ನಲ್ಲಿರಿಸಿದ್ದ. ಮುಂದಿನ 18 ದಿನಗಳ ಕಾಲ ಅವುಗಳನ್ನು ನಗರದ ವಿವಿಧೆಡೆಗಳಲ್ಲಿ ಎಸೆದಿದ್ದ.







