30 ವರ್ಷದ ಹಿಂದೆ ಘನೀಕರಿಸಿದ ಭ್ರೂಣದಿಂದ ಅವಳಿ ಮಕ್ಕಳ ಪಡೆದ ದಂಪತಿ

ನ್ಯೂಯಾರ್ಕ್, ನ.22: 30 ವರ್ಷದ ಹಿಂದೆ ಘನೀಕರಿಸಲಾದ ಭ್ರೂಣಮೂಲದಿಂದ ಅವಳಿ ಮಕ್ಕಳನ್ನು ಪಡೆದ ಅಮೆರಿಕ(America)ದ ಒರೆಗಾನ್ ಪ್ರಾಂತದ ದಂಪತಿ ಹೊಸ ವಿಶ್ವ ದಾಖಲೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ.
30 ವರ್ಷದ ಹಿಂದೆ, 1992ರ ಎಪ್ರಿಲ್ ನಲ್ಲಿ `ವಿಟ್ರೊ ಫಲವತ್ತತೆ'(``In Vitro Fertilization'')ಯನ್ನು ಬಳಸಿದ ಅನಾಮಧೇಯ ದಾನಿ ದಂಪತಿ ಭ್ರೂಣಗಳನ್ನು ಶೂನ್ಯಕ್ಕಿಂತ 200 ಡಿಗ್ರಿ ಕೆಳಮಟ್ಟದ ತಾಪಮಾನದಲ್ಲಿ ಸಂರಕ್ಷಿಸಿಟ್ಟಿದ್ದರು. ಇವನ್ನು 2007ರಲ್ಲಿ `ವೆಸ್ಟ್ಕೋಸ್ಟ್ ಫರ್ಟಿಲಿಟಿ ಲ್ಯಾಬ್'(``Westcoast Fertility Lab'')ಗೆ ಹಸ್ತಾಂತರಿಸಲಾಗಿದೆ.
ಈ ಭ್ರೂಣಗಳಿಂದ 2022ರ ಅಕ್ಟೋಬರ್ 31ರಂದು ಅವಳಿ ಮಕ್ಕಳನ್ನು ಪಡೆದ ರಾಚೆಲ್ ಮತ್ತು ಫಿಲಿಪ್(Rachel and Philip) ದಂಪತಿ ಮಕ್ಕಳಿಗೆ ಲಿಡಿಯಾ ಮತ್ತು ಟಿಮೋಟಿ(Lydia and Timothy) ಎಂದು ನಾಮಕರಣ ಮಾಡಿದ್ದಾರೆ. ಈ ಅವಳಿ ಮಕ್ಕಳು `ವಿಶ್ವದ ಅತ್ಯಂತ ಹಿರಿಯ ಮಕ್ಕಳು'('World's Oldest Children') ಎಂಬ ಖ್ಯಾತಿ ಪಡೆದಿದ್ದಾರೆ.
ಈ ಹಿಂದೆ 27 ವರ್ಷ ಘನೀಕರಿಸಿದ್ದ ಭ್ರೂಣದಿಂದ ಜನ್ಮ ತಳೆದ ಮೋಲಿ ಗಿಬ್ಸನ್ ಹೆಸರಲ್ಲಿದ್ದ ದಾಖಲೆಯನ್ನು ಈ ಅವಳಿ ಮಕ್ಕಳು ಅಳಿಸಿಹಾಕಿದ್ದಾರೆ ಎಂದು ವರದಿಯಾಗಿದೆ.