ಮಂಗಳೂರು: ಸಕಾಲಕ್ಕೆ ಲಗ್ಗೇಜ್ ಕೊಡಲು ನಿರಾಕರಣೆ; ಪ್ರಯಾಣಿಕರ ಆರೋಪ

ಮಂಗಳೂರು, ನ.22: ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರ ಲಗ್ಗೇಜ್‌ಗಳನ್ನು ಸಕಾಲಕ್ಕೆ ಕೊಡಲು ವಿಮಾನ ಯಾನ ಕಂಪೆನಿಗಳು ಸತಾಯಿಸುತ್ತಿವೆ ಎಂಬ ಆರೋಪ ಕೇಳಿ ಬಂದಿವೆ.
ಮಂಗಳವಾರ ರಾತ್ರಿ ದುಬೈನಿಂದ ಮಂಗಳೂರಿಗೆ ಬಂದಿಳಿದ ಸ್ಪೈಸ್ ಜೆಟ್ ವಿಮಾನದಲ್ಲಿದ್ದ 180ಕ್ಕೂ ಅಧಿಕ ಪ್ರಯಾಣಿಕರ ಲಗ್ಗೇಜ್‌ಗಳನ್ನು ಕೊಡಲು ಸತಾಯಿಸುತ್ತಿದ್ದಾರೆ ಎಂದು ಭಟ್ಕಳ ಮೂಲದ ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ದುಬೈಯಿಂದ ಸಂಜೆ 4:20ಕ್ಕೆ ಹೊರಡಬೇಕಿದ್ದ ವಿಮಾನವು ಮೂರು ಗಂಟೆ ತಡವಾಗಿ ಹೊರಟಿದೆ. ಮಂಗಳೂರು ತಲುಪಿದ ಬಳಿಕ ನಮ್ಮ ಲಗೇಜ್‌ಗಳನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಗೋ ಮೂಲಕ ಸಾಗಣೆ ವ್ಯವಸ್ಥೆ ಕಲ್ಪಿಸಿ 2-3 ದಿನದ ಬಳಿಕ ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಲಗ್ಗೇಜ್‌ಗಳಲ್ಲಿ ಚಾಕ್ಲೆಟ್ ಮತ್ತಿತರ ಸಾಮಗ್ರಿಗಳಿವೆ. ತಡವಾಗಿ ಲಗ್ಗೇಜ್ ಕೈ ಸೇರಿದರೆ ಅವುಗಳು ಕೆಡುವ ಸಾಧ್ಯತೆ ಇದೆ. ವಿಮಾನ ಯಾನ ಕಂಪನಿಯು ಹಣದಾಸೆಗಾಗಿ ಉದ್ದೇಶಪೂರ್ವಕವಾಗಿ ಇಂತಹ ಕುಕೃತ್ಯ ಮಾಡುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗೆ ಸ್ಪೈಸ್ ಜೆಟ್ ಅಧಿಕಾರಿಗಳು ಸಿಗಲಿಲ್ಲ.