ನ.26ರಂದು ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2022

ಮಂಗಳೂರು, ನ.23: ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ರಾಜ್ಯಮಟ್ಟದ, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2022ರ ಅಂತಿಮ ಸುತ್ತಿನ ಸ್ಪರ್ಧೆ ನ.26ರಂದು ನಡೆಯಲಿದೆ ಎಂದು ಕಾಲೇಜಿನ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿವಿಧ ಶಾಲೆ, ಪಪೂ ಕಾಲೇಜುಗಳಿಂದ ಸುಮಾರು 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಕೌಶಲಗಳ ಮಾದರಿ ಪ್ರದರ್ಶಿಸಲಿದ್ದಾರೆ. ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಿ ಅಂತಿಹ ಹಂತಕ್ಕೆ ಆಯ್ಕೆ ಮಾಡಲಾಗಿದೆ. ನ.24 ಮತ್ತು 25ರಂದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮ್ಮ ಮಾದರಿಗಳನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಲಿದ್ದು, ಅವರ ಸಲಹೆ- ಸೂಚನೆಗಳಂತೆ ಮಾದರಿಯಲ್ಲಿ ಬದಲಾವಣೆ ಮಾಡಿ, ಅಂತಿಮ ಸುತ್ತಿಗೆ ಸಿದ್ಧಪಡಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಟಿಯು ರಿಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ, ನೀತಿ ಆಯೋಗದ ಪೃಥ್ವಿ ಸಾಯಿ ಪೆನುಮಾಡು, ಎನ್‌ಪವರ್ ಸಂಸ್ಥಾಪಕ ಮತ್ತು ಸಿಇಒ ಸುಶೀಲ್ ಮುಂಗೇಕರ್, ಬಿಯಾಂಡ್ ಬೆಂಗಳೂರು ಕಾರ್ಯಕ್ರಮ ನಿರ್ವಾಹಕ ಮುಕೇಶ್ ಎಸ್., 99 ಗೇಮ್ಸ್ ಸ್ಥಾಪಕ ಮತ್ತು ಸಿಇಒ ರೋಹಿತ್ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಮಾದರಿಗಳಿಗೆ ನಗದು ಬಹುಮಾನ ದೊರೆಯಲಿದ್ದು, ಮಾದರಿಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುದಾನವನ್ನೂ ಸಂಸ್ಥೆ ವತಿಯಿಂದ ದೊರಕಿಸಿಕೊಡಲಾಗುವುದು ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ನಾಗೇಶ್ ಎಚ್.ಆರ್., ಕಾರ್ಯಕ್ರಮ ಸಂಯೋಜಕಿ ಪ್ರಣಮ್ಯಾ ಉಪಸ್ಥಿತರಿದ್ದರು.