ಸುಳ್ಯ: ನ.30ರಂದು ‘ಪತ್ರಕರ್ತರ ಸಮುದಾಯ ಭವನ’ದ ನೆಲ ಅಂತಸ್ತು ಉದ್ಘಾಟನೆ
ಮಂಗಳೂರು, ನ.23: ಪ್ರೆಸ್‌ಕ್ಲಬ್ ಸುಳ್ಯದ ವತಿಯಿಂದ ಸುಳ್ಯದ ಅಂಬಟಡ್ಕದಲ್ಲಿ ನಿರ್ಮಾಣಗೊಂಡ ‘ಪತ್ರಕರ್ತರ ಸಮುದಾಯ ಭವನ’ದ ನೆಲ ಅಂತಸ್ತಿನ ಉದ್ಘಾಟನೆ ನ.30ರಂದು ನಡೆಯಲಿದೆ. ಸುಳ್ಯ ಪ್ರೆಸ್‌ಕ್ಲಬ್‌ಗೆ ತಾಲೂಕು ಪಂಚಾಯತ್ ನೀಡಿದ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ.
ಒಟ್ಟು 1.25 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ದಾನಿಗಳ ನೆರವಿನಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೆಲ ಅಂತಸ್ತಿನ ಕಾಮಗಾರಿ ಪೂರ್ತಿಗೊಂಡಿದೆ ಎಂದು ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಳ್ಯ ಶಾಸಕ ಹಾಗೂ ರಾಜ್ಯ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭವನವನ್ನು ಉದ್ಘಾಟಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ, ಎಂಎಲ್‌ಸಿ ಹರೀಶ್ ಕುಮಾರ್ ವಿವಿಧ ವಿಭಾಗಗಳ ಉದ್ಘಾಟನೆಯನ್ನು ನೆರವೇರಿಸುವರು.
ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಡಾ.ಯು.ಪಿ.ಶಿವಾನಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಪ್ರಮುಖರಾದ ಡಾ.ಕೆ.ವಿ.ಚಿದಾನಂದ, ಡಾ.ರೇಣುಕಾಪ್ರಸಾದ್ ಕೆ.ವಿ., ಕೆಎಂಡಿಸಿ ಅಧ್ಯಕ್ಷ ಎ.ವಿ. ತೀರ್ಥರಾಮ ಸಹಿತ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದರು.
ಬೆಳಗ್ಗೆ 9:30ರಿಂದ ವಿದುಷಿ ವಿಭಾ ಶ್ರೀನಿವಾಸ ನಾಯಕ್ ಅವರಿಂದ ಶಾಸೀಯ ಸಂಗೀತ ಕಛೇರಿ ನಡೆಯಲಿದೆ. ಮಧ್ಯಾಹ್ನ 1ರಿಂದ ಹಿರಿಯ ಗಾಯಕ ಶಶಿಧರ ಕೋಟೆ ಬಳಗದವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಂಮನೆ, ನಿರ್ದೇಶಕರಾದ ಜೆ.ಕೆ.ರೈ, ಜಯಪ್ರಕಾಶ್ ಕುಕ್ಕೆಟ್ಟಿ, ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.