ನ. 26ರಂದು ಹೊನಲು ಬೆಳಕಿನ ಕ್ರೀಡೋತ್ಸವ

ಮಂಗಳೂರು, ನ.23: ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯ ಆವರಣದಲ್ಲಿ ನ.26ರಂದು ಸಂಜೆ 5ರಿಂದ ಹೊನಲು ಬೆಳಕಿನ ಕ್ರೀಡೋತ್ಸವ ಆಯೋಜಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಕ್ರೀಡೋತ್ಸವ ಉದ್ಘಾಟಿಸುವರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸುವರು. ಸಚಿವ ವಿ.ಸುನಿಲ್‌ಕುಮಾರ್, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ಶಾಸಕರಾದ ಡಿ.ವೇದವ್ಯಾಸ ಕಾಮತ್, ಯು.ಟಿ. ಖಾದರ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಜಯಾನಂದ ಅಂಚನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5ರಿಂದ ನಿರಂತರ ನಾಲ್ಕು ಗಂಟೆಗಳ ಕಾಲ ಶಾರದಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಹಸ, ಸಾಂಸ್ಕೃತಿಕ ಕಲಾಪ್ರಕಾರಗಳೊಂದಿಗೆ ಪ್ರದರ್ಶನ ನೀಡಲಿದ್ದಾರೆ. ಸ್ಕೇಟಿಂಗ್ ಪ್ರದರ್ಶನ, ಚೆಂಡೆ ಕುಣಿತ, ಎನ್‌ಸಿಸಿ ಪಥಸಂಚಲನ, ಕುಣಿತ ಭಜನೆ, ಮಾರ್ಷಲ್ ಆರ್ಟ್, ಮಲ್ಲಕಂಬ, ತಿರುಗುವ ಮಲ್ಲಕಂಬ ಸಾಹಸ ಪ್ರದರ್ಶನ, ರೋಬೋ ಶೋ, ಭಾರತೀಯ ಜಾನಪದ ನೃತ್ಯದೊಂದಿಗೆ ವಿನ್ಯಾಸ ಪ್ರದರ್ಶನ, ಯೋಗಾಸನ, ಬೆಂಕಿಯಲ್ಲಿ ತಾಲೀಮು ಪ್ರದರ್ಶನ, ಪ್ರತಿಭಾನ್ವಿತ ಕಲಾ ಪ್ರತಿಭೆಗಳಿಂದ ಘೋಷ್, ಸಂಗೀತ ಸಮೂಹ ಗಾಯನ ಮೊದಲಾದ ಕಲಾಪ್ರಕಾರಗಳು ಮೈನವಿರೇಳಿಸಲಿವೆ. ಕಾಂತಾರ ಚಲನಚಿತ್ರದ ಚಿತ್ರಪಟದ ಹಿನ್ನೆಲೆಯ ಪ್ರವೇಶದ್ವಾರ ಈ ವರ್ಷದ ಕ್ರೀಡೋತ್ಸವದ ಆಕರ್ಷಣೆ. ಕಾಂತಾರ ಸಿನೆಮಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸಂಸ್ಥೆ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ, ಟ್ರಸ್ಟಿ ಸಮೀರ್ ಪುರಾಣಿಕ್, ಶಾರದಾ ಪಪೂ ಕಾಲೇಜು ಪ್ರಾಂಶುಪಾಲ ಮಹಾಬಲೇಶ್ವರ ಭಟ್, ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲು ಉಪಸ್ಥಿತರಿದ್ದರು.