ಮಂಗಳೂರು ಸ್ಫೋಟ ಪ್ರಕರಣಕ್ಕೆ ಪೊಲೀಸ್ ಗುಪ್ತಚರ ವಿಭಾಗದ ವೈಫಲ್ಯ ಕಾರಣ: ಕೆಪಿಸಿಸಿ ವಕ್ತಾರ ವಿನಯರಾಜ್ ಆರೋಪ

ಮಂಗಳೂರು, ನ.23: ರಾ.ಹೆ.75ರ ನಾಗುರಿಯಲ್ಲಿ ಕಳೆದ ಶನಿವಾರ ನಡೆದ ಸ್ಫೋಟ ಪ್ರಕರಣಕ್ಕೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್, ರಾಜ್ಯ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ಘಟನೆಯ ಹಿಂದೆ ಇರುವ ಶಕ್ತಿಗಳನ್ನು ನಿಗ್ರಹಿಸಬೇಕು ಮತ್ತು ಯುಎಪಿಎ ಕಾಯ್ದೆಯಡಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ಈ ಸ್ಫೋಟವು ಜನನಿಬಿಡ ಪ್ರದೇಶದಲ್ಲಿ ನಡೆದಿದ್ದರೆ ಅಮಾಯಕರು ಮೃತಪಟ್ಟು ಜಿಲ್ಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಗೆ ಇದರ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದಿರುವುದು ವಿಪರ್ಯಾಸ ಎಂದರು.
ಆರೋಪಿ ಶಾರಿಕ್ ಬಗ್ಗೆ ಗೃಹ ಇಲಾಖೆಯು ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣವಾಗಿದೆ. 2020ರಲ್ಲಿ ಪ್ರಚೋದಿತ ಗೋಡೆ ಬರಹದ ಪ್ರಮುಖ ಆರೋಪಿಯಾಗಿದ್ದ ಈತನ ಬಗ್ಗೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿತ್ತು. ಹೈಕೋರ್ಟ್ ಈತನಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಕ್ಲಪ್ತ ಸಮಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸದೆ ವಿಳಂಬ ನೀತಿ ಅನುಸರಿಸಿದ್ದೇ ಈತನಿಗೆ ವರದಾನವಾಗಿದೆ ಎಂದು ವಿನಯರಾಜ್ ಹೇಳಿದರು.
ಜಾಮೀನು ಸಿಕ್ಕಿದ ಬಳಿಕ ಈತ ತಲೆಮರೆಸಿಕೊಂಡಿದ್ದು, ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಈತನನ್ನು ಮತ್ತೆ ಬಂಧಿಸಲು ಮಂಗಳೂರು ಪೊಲೀಸರು ವಿಫಲವಾಗಿದ್ದರು. ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ತಿಂಗಳಿಗೊಮ್ಮೆ ಠಾಣೆಗೆ ಕರೆಸಿ ಈತನ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಯಾಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅನಿಲ್ ಪೂಜಾರಿ, ಅಪ್ಪಿ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ರಾಕೇಶ್ ದೇವಾಡಿಗ, ನೀರಜ್ ಪಾಲ್ ಉಪಸ್ಥಿತರಿದ್ದರು.