ಮಂಗಳೂರು: ಗ್ಯಾಸ್ ಸಿಲಿಂಡರ್ ಕಳವು ಪ್ರಕರಣ; ಆರೋಪಿಗೆ ಶಿಕ್ಷೆ

ಮಂಗಳೂರು: ನಗರದ ಬಿಜೈ ಕೈಬಟ್ಟಲಿನ ರೇಗೋ ಕಾಂಪೌಂಡ್‌ನ ಮನೆಯೊಂದರಿಂದ ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣು ಪೂಜಾರಿ ಎಂಬಾತನ ವಿರುದ್ಧ ಆರೋಪ ಸಾಬೀತಾಗಿದ್ದು, 2ನೇ ಸಿಜೆಎಂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದ ಎರಡನೇ ಆರೋಪಿ ಗಂಗಯ್ಯ ನೀಲಕಂಠಯ್ಯ ಮುತ್ತಯ್ಯನ ಮಠ ಯಾನೆ ಸ್ವಾಮಿ ಎಂಬವನನ್ನು ಸಾಕ್ಷಿಯ ಕೊರತೆಯಿಂದ ಖುಲಾಸೆಗೊಳಿಸಿದೆ.
ಪಾಣೆಮಂಗಳೂರು ಸಮೀಪದ ನರಿಕೊಂಬು ನಿವಾಸಿ ಅಣ್ಣು ಪೂಜಾರಿ (55) ಮತ್ತು ಗಂಗಯ್ಯ ನೀಲಕಂಠಯ್ಯ ಮುತ್ತಯ್ಯನ ಮಠ ಯಾನೆ ಸ್ವಾಮಿ (53) ಎಂಬವರು 2022ರ ಆ.1ರಂದು ಮಧ್ಯಾಹ್ನ ಕದ್ರಿ ಕೈಬಟ್ಟಲು ರೇಗೊ ಕಾಂಪೌಂಡಿನ ಜಾರ್ಜ್ ಸಿಕ್ವೆರಾ ಎಂಬವರ ಮನೆಯ ಹಿಂಬದಿಯಿಂದ ಅಡುಗೆ ಕೋಣೆಯನ್ನು ಪ್ರವೇಶಿಸಿ 4 ಸಾವಿರ ರೂ. ಮೌಲ್ಯದ ಎರಡು ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಬಂಧಿಸಿದ್ದರು. ಅಲ್ಲದೆ ಗ್ಯಾಸ್ ಸಿಲಿಂಡರ್ ವಶಪಡಿಸಿಕೊಂಡಿದ್ದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ 2ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ್ ಪಿ.ಭಾಗವತ್ ಕೆ. 1ನೇ ಆರೋಪಿ ಅಣ್ಣು ಪೂಜಾರಿ ತಪ್ಪಿತಸ್ಥರೆಂದು ನಿರ್ಣಯಿಸಿ 1 ವರ್ಷ ಜೈಲು ಶಿಕ್ಷೆ ಮತ್ತು 250 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 2 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಅಣ್ಣು ಪೂಜಾರಿಗೆ ಸಹಕರಿಸಿದ ಗಂಗಯ್ಯ ನೀಲಕಠಂಯ್ಯನನ್ನು ಸಾಕ್ಷ್ಯಧಾರದ ಕೊರತೆಯಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಸರಕಾರದ ಪರವಾಗಿ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ, ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.