ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ನೀಡದೆ ಇದ್ದಲ್ಲಿ ರಾಹುಲ್ ಯಾತ್ರೆಗೆ ರಾಜಸ್ಥಾನದಲ್ಲಿ ತಡೆ : ಗುರ್ಜರ್ ನಾಯಕನ ಬೆದರಿಕೆ
ಅಂತರ ಕಾಯ್ದುಕೊಂಡ ಪೈಲಟ್ ಪಾಳಯ

ಹೊಸದಿಲ್ಲಿ,ನ.23: ಒಂದು ವೇಳೆ ಸಚಿನ್ ಪೈಲಟ್(Sachin is a pilot) ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದೇ ಇದ್ದಲ್ಲಿ ರಾಹುಲ್ ಗಾಂಧಿ(Rahul Gandhi) ನೇತೃತ್ವದ ಭಾರತ್ ಜೋಡೋ (Bharat Jodo)ಯಾತ್ರೆಗೆ ರಾಜಸ್ಥಾನದಲ್ಲಿ ತಡೆ ಒಡ್ಡಲಾಗುವುದೆಂದು ಗುರ್ಜರ್ ಸಮುದಾಯದ ನಾಯಕ ವಿಜಯ್ ಸಿಂಗ್ ಬೈನ್ಸಾಲಾ(Vijay Singh Bainsala) ಬೆದರಿಕೆ ಹಾಕಿದ್ದಾರೆ. ಆದರೆ ಬೈನ್ಸ್‌ಲಾ ಅವರ ಈ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಸಚಿನ್ ಪೈಲಟ್‌ಅವರ ಅಪ್ತ ಮೂಲಗಳು ಸ್ಪಷ್ಟಪಡಿಸಿವೆ. ರಾಹುಲ್ ಗಾಂಧಿಯವರ ಯಾತ್ರೆಗೆ ಯಾಕೆ ಅಡ್ಡಿಪಡಿಸಬೇಕು ಎಂದು ಅವು ಪ್ರಶ್ನಿಸಿವೆ.
ಗುರ್ಜರ್ ನಾಯಕ ವಿಜಯ್ ಸಿಂಗ್ ಬೈನ್ಸಾಲಾ ಅವರು ನೀಡಿದ ವಿಡಿಯೋ ಹೇಳಿಕೆಯೊಂದರಲಿ, ರಾಜಸ್ಥಾನದ ಹಾಲಿ ಸರಕಾರವು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ್ದು, ಒಂದು ವರ್ಷವಷ್ಟೇ ಬಾಕಿ ಉಳಿದಿದೆ. ಈಗ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕಾಗಿದೆ. ಒಂದು ವೇಳೆ ಅದು ನಡೆದಲ್ಲಿ, ಆಗ ನಿಮಗೆ (ರಾಹುಲ್‌ಗಾಂಧಿ) ಸ್ವಾಗತ. ಇಲ್ಲದೆ ಇದ್ದಲ್ಲಿ ಯಾತ್ರೆಯನ್ನು ವಿರೋಧಿಸುತ್ತೇವೆ ’’ ಎಂದು ಎಚ್ಚರಿಕೆ ನೀಡಿದ್ದರು.
ರಾಜಸ್ಥಾನದ ಮುಖ್ಯಮಂತ್ರಿಗೆ ಹುದ್ದೆಗೆ ಸಚಿವ್ ಪೈಲಟ್ ಅವರನ್ನು ನೇಮಿಸಬೇಕೆಂದು ಬೈನ್ಸಾಲಾ ಆಗ್ರಹಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಸಚಿನ್ ಪೈಲಟ್ ಸೇರಿಕೊಳ್ಳುವುದಕ್ಕೆ ಒಂದು ದಿನ ಮೊದಲು ಬೈನ್ಸಾಲಾ ಅವರು ಈ ಬೇಡಿಕೆಯಿಟ್ಟಿದ್ದಾರೆ.
ರಾಜಸ್ಥಾನದಲ್ಲಿ ಗುರ್ಜರ್ ಮುಖ್ಯಮಂತ್ರಿಯಿಲ್ಲದೇ ಇರುವುದರಿಂದ ಇಡೀ ಸಮುದಾಯವು ಬಾಧಿತವಾಗಿದೆ ಎಂದು ಬೈನ್ಸಾಲಾ ಹೇಳಿದರು.
‘‘ಗುರ್ಜರ್ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ದೊರೆಯಬೇಕೆಂಬ ತಮ್ಮ ಬೇಡಿಕೆಯ ಈಡೇರಿಕೆಗಾಗಿ ನಾವು ಎಷ್ಟು ದಿನ ಕಾಯಬೇಕು?. ನಾವು ಯಾಕೆ ಘರ್ಷಣೆ ಅಥವಾ ಸಂಘರ್ಷದೆಡೆಗೆ ಮುಖಮಾಡಬೇಕು?. ನೀವು ಜನತೆಯ ಆಶೋತ್ತರಗಳಿಗೆ ಹಾಗೂ ಆಕಾಂಕ್ಷೆಗಳ ಮೇಲೆ ಸವಾರಿ ಮಾಡುತ್ತಿದ್ದೀರಿ? ’’ ಎಂದು ಗುರ್ಜರ್ ನಾಯಕ ಬೈನ್ಸ್‌ಲಾ ಕಾಂಗ್ರೆಸ್ ವರಿಷ್ಛರನ್ನು ಹೆಸರೆತ್ತದೇ ಹೇಳಿದರು. ಈ ವಿಷಯವು ರಾಹುಲ್ ಅವರನ್ನು ತಲುಪಬೇಕಾಗಿದೆ. ಆದರೆ ಬಹುಶಃ ಅವರಿಗೆ ಇಲ್ಲಿ ಏನಾಗುತ್ತಿದೆಯೆಂದು ತಿಳದಿರಲಾರದು ಎಂದು ಬೈನ್ಸ್‌ಲಾ ಹೇಳಿದರು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹಾಗೂ ಸಚಿನ್ ಪೈಲಟ್ ನಡುವಿನ ತಿಕ್ಕಾಟವು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರವುಂಟು ಮಾಡುವ ಸಾಧ್ಯತೆಯಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.







