ಫಿಫಾ ವಿಶ್ವಕಪ್: ಕೋಸ್ಟರಿಕ ವಿರುದ್ಧ ಸ್ಪೇನ್ ಗೆಲುವಿನ ಕೇಕೆ
ಫೆರಾನ್ ಟೊರೆಸ್ ಅವಳಿ ಗೋಲು

ದೋಹಾ, ನ.23: ಫೆರಾನ್ ಟೊರೆಸ್ ಬಾರಿಸಿದ ಅವಳಿ ಗೋಲುಗಳ ಸಹಾಯದಿಂದ ಸ್ಪೇನ್ ತಂಡ ಕೋಸ್ಟರಿಕ ವಿರುದ್ಧದ ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ‘ಇ’ ಪಂದ್ಯದಲ್ಲಿ 7-0 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ಬುಧವಾರ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಪರ 11ನೇ ನಿಮಿಷದಲ್ಲಿ ಗೋಲು ಗಳಿಸಿದ ಡ್ಯಾನಿ ಒಲ್ಮೊ 1-0 ಮುನ್ನಡೆ ಒದಗಿಸಿಕೊಟ್ಟರು. 21ನೇ ನಿಮಿಷದಲ್ಲಿ ಗೋಲು ಗಳಿಸಿದ ಮಾರ್ಕೊ ಅಸೆನ್ಸಿಯೊ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. 31ನೇ ನಿಮಿಷದಲ್ಲಿ ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಟೊರೆಸ್ ಮೊದಲಾರ್ಧದ ಅಂತ್ಯಕ್ಕೆ ಸ್ಪೇನ್ 3-0 ಮುನ್ನಡೆ ಪಡೆಯುವಲ್ಲಿ ನೆರವಾದರು.
54ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಟೊರೆಸ್ ಸ್ಪೇನ್ ಮುನ್ನಡೆಯನ್ನು ಹಿಗ್ಗಿಸಿದರು.
ಇಂದು ಸ್ಪೇನ್ ಪರ ವಿಶ್ವಕಪ್‌ನಲ್ಲಿ ಆಡಿದ ಯುವ ಆಟಗಾರನಾಗಿರುವ ಗವಿ 74ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದೀಗ ವಿಶ್ವಕಪ್ ನಲ್ಲಿ ಗೋಲು ಗಳಿಸಿದ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.
ಕಾರ್ಲೊಸ್ ಸೊಲೆರ್ 90ನೇ ನಿಮಿಷದಲ್ಲಿ ಹಾಗೂ ಅಲ್ವಾರೊ ಮೊರಾಟ 90+2ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು.