ಅಧಿಸೂಚನೆಗೆ ಹನ್ನೆರಡು ದಿನವಾದರೂ ಸ್ಥಗಿತಗೊಳ್ಳದ ಸುಂಕ ಸಂಗ್ರಹ: ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ
ನಾಲ್ಕು ವಾರ ಪೂರ್ತಿಗೊಳಿಸಿದ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಹಗಲು-ರಾತ್ರಿ ಧರಣಿ

ಸುರತ್ಕಲ್, ನ.24: ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಇಂದು 28 ದಿನಗಳನ್ನು ಪೂರ್ಣಗೊಳಿಸಿತು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಕಾರ್ಯಕರ್ತರು ಇಂದಿನ ಧರಣಿಯಲ್ಲಿ ಪಾಲ್ಗೊಂಡರು. ಅಧಿಸೂಚನೆ ಹೊರಟು ಹನ್ನೆರಡು ದಿನ ಕಳೆದರೂ ಟೋಲ್ ಸುಂಕ ಸಂಗ್ರಹ ಸ್ಥಗಿತಗೊಳಿಸಲು ವಿಫಲವಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಸಹಿತ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯಕರು, ಸ್ಥಳೀಯ ಶಾಸಕ ಭರತ್ ಶೆಟ್ಟಿಯವರ ವೈಫಲ್ಯಗಳನ್ನು ಬೊಟ್ಟು ಮಾಡಿ ವಾಗ್ದಾಳಿ ನಡೆಸಿದರು. ಕುಕ್ಕರ್ ಸ್ಫೋಟ, ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮುಸ್ಲಿಂ ಸಂತೆ ವ್ಯಾಪಾರಿಗಳಿಗೆ ನಿರ್ಬಂಧ ಮುಂತಾದ ವಿಷಯಗಳಿಗೆ ಮತೀಯ ಬಣ್ಣ ಬಳಿದು ಟೋಲ್ ಗೇಟ್ ವಿಷಯವನ್ನು ಮುಸುಕುಗೊಳಿಸಲು ಬಿಜೆಪಿ ಶಾಸಕರು ಹನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯ ಚಂದ್ರ ಜೈನ್, ಇನಾಯತ್ ಅಲಿ, ಮಿಥುನ್ ರೈ, ಉಮೇಶ್ ದಂಡಕೇರಿ, ಬಿ.ಕೆ. ಇಮ್ತಿಯಾಝ್, ಎಂ. ದೇವದಾಸ್, ಶಾಲೆಟ್ ಪಿಂಟೊ, ವೈ ರಾಘವೇಂದ್ರ ರಾವ್, ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಮೇಯರ್ ಗಳಾದ ಹರಿನಾಥ್, ಕೆ.ಅಶ್ರಫ್, ಶ್ರೀನಾಥ್ ಕುಲಾಲ್, ಪ್ರಮೀಳಾ, ಆನಂದ ಅಮೀನ್, ಸದಾಶಿವ ಶೆಟ್ಟಿ, ಶಮೀರ್ ಕಾಟಿಪಳ್ಳ, ಮುಹಮ್ಮದ್ ರಫಿ, ಮುಂಜುಳಾ ನಾಯಕ್, ಸಿರಾಜ್ ಮೋನು ಉಳಾಯಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸರಕಾರ ಸುರತ್ಕಲ್ ಟೋಲ್‌ಗೇಟನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸುವ ಮಾಹಿತಿ ನೀಡದೆ. ಅದರ ಜೊತೆಗೆ ವಿಲೀನವಾದರೆ ಸುಂಕ ಶೇಖರಣೆಯ ಮೌಲ್ಯವನ್ನು ಹೆಚ್ಚಿಸುವ ಕುರಿತು ಮಾಹಿತಿ ಇದೆ. ಸುರತ್ಕಲ್ ಟೋಲ್‌ಗೇಟನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡುವ ಕುರಿತು 2018ಮಾರ್ಚ್‌ನಲ್ಲಿ ಸರಕಾರಿ ಉನ್ನತ ಮಟ್ಟದ ಅಧೀಕಾರಿಗಳ ಸಭೆ ನಡೆದಿತ್ತು. ಆ ಸಭೆಯಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರಕಾರದ ಕಾರ್ಯದರ್ಶಿ, ಭಾರತೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವಿಭಾಗದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಂಪರ್ಕ ಮತ್ತು ಕಟ್ಟಡ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಮೊದಲಾದವರನ್ನೊಳಗೊಂಡ ಸಭೆ ನಡೆಸಲಾಗಿತ್ತು.
ಈ ಸಭೆಯಲ್ಲಿ ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಫ್ಲಾಝಾಗಳನ್ನು ವಿಲೀನ ಗೊಳಿಸಿ ಒಂದೇ ಟೋಲ್ ಫ್ಲಾಝಾ ಮಾಡಲು ಸಭೆ ಒಪ್ಪಿಗೆ ನೀಡಿತ್ತು. ಟೋಲ್‌ಗೇಟ್‌ಗಳ ಸುಂಕದ ದರ ಹೆಚ್ಚಾಗಿದ್ದು ಅದನ್ನು ಕಡಿಮೆಗೋಲಿಸುವ ಕುರಿತು ಸಭೆ ತೀರ್ಮಾನಿಸಿತ್ತು. ಆಂಬುಲೆನ್ಸ್ ಮತ್ತು ಕೃಷಿ ಉತ್ಪನ್ನ ಸಾಗಿಸುವ (ಆಟೊರಿಕ್ಷಾಗಳಿಗೆ) ಉಚಿತ ಪ್ರಯಾಣಕ್ಕೆ ಅವಕಾಶ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸದಿರಲು ತೀರ್ಮಾನಿಸಿತ್ತು ಮತ್ತು 20 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಮಾಸಿಕ ಪಾಸ್ ನೀಡುವ ಕುರಿತು ಸಭೆ ನಿರ್ಣಯಿಸಿತ್ತು. ಆದರೆ ಇತ್ತೀಚಿನ ವಿಲೀನ ಪ್ರಕ್ರಿಯೆ ನೋಟಿಫಿಕೇಶನ್‌ನಲ್ಲಿ ಇವೆಲ್ಲವನ್ನೂ ಉಲ್ಲಂಘಿಸಲಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.
ಅಲ್ಲದೇ, ಈ ಸಭೆಯ ಬಳಿಕ ಟೋಲ್ ಶುಲ್ಕ ಕಡಿತಗೊಳಿಸುವ ತೀರ್ಮಾನಕೈಗೊಂಡಿತ್ತು. ಅದರಂತೆ ಕಾರು, ಜೀಪು ಸಹಿತ ಸಣ್ಣ ವಾಹನಗಳಿಗೆ ಹೋಗಲು 32 ರೂ., ಹೋಗಿ ಹಿಂದಿರುಗಿದರೆ 50 ರೂ. ಮಾಸಿಕ ಪಾಸ್ 1100 ವಿಧಿಸಲಾಗಿತ್ತು.
ಅದರಂತೆಯೇ ಸಣ್ಣ ವಾಹನಗಳು, ಗೂಡ್ಸ್ ವಾಹನಗಳು, ಮಿನಿ ಬಸ್‌ಗಳಿಗೆ ಒಂದು ಭಾಗಕ್ಕೆ 55 ರೂ. ಮತ್ತು ಹೋಗಿ ಬರುವುದಾದರೆ 80ರೂ. ಮಾಸಿಕ ಪಾಸ್ 1775 ರೂ. ನಿಗದಿ ಪಡಿಸಿತ್ತು. ಬಸ್ ಮತ್ತು ಲಾರಿಗಳಿಗೆ 110ರೂ. ಎರಡೂ ಭಾಗಗಳಿಗೆ 165 ಮಾಸಿಕ 3720, ಘನ ವಾಹನಗಳಿಗೆ 175 ರೂ., ಹಿಂದಿರುಗಿ ಬರಲು 265 ರೂ., ಮಾಸಿಕ ಪಾಸ್‌ಗೆ 5835ರೂ. ನಿಗದಿ ಮಾಡಿತ್ತು. 7 ಮತ್ತು ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ಗಳ ವಾಹನಗಳಿಗೆ ಒನ್‌ವೇ 215 ರೂ. ಟೂ ವೇ 320 ರೂ. ಹಾಗೂ ಮಾಸಿಕ 7105 ರೂ ನಿಗದಿ ಮಾಡಿತ್ತು. ಆದರೆ, ಇತ್ತೀಚಿನ ವಿಲೀನದ ಅಧಿಸೂಚನೆಯಲ್ಲಿ ಸಭೆಯ ನಿರ್ಣಯಗಳನ್ನು ಗಾಳಿಗೆ ತೂರಿ ಈಗ ಇರುವ ಶುಲ್ಕಕ್ಕಿಂತಲೂ ಹೆಚ್ಚಿನ ದರ ವಸೂಲಿಗೆ ಸಂಚು ರೂಪಿಸಲಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.