ಸುರತ್ಕಲ್ ಟೋಲ್ ಶುಲ್ಕ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸಂಗ್ರಹ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್‌ಗೇಟ್‌ನ ದರವನ್ನು ಪರಿಷ್ಕೃರಿಸಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದೆ.
"ಕರ್ನಾಟಕ ಸರ್ಕಾರದ ನಿರಂತರ ವಿನಂತಿ/ಬೇಡಿಕೆ ಮೇರೆಗೆ, ಸ್ಥಳೀಯ ಸಾರ್ವಜನಿಕ/ವಿಐಪಿ ಒತ್ತಾಯಗಳ ಆಧಾರದ ಮೇಲೆ, ಸಕ್ಷಮ ಪ್ರಾಧಿಕಾರವು ಹೊಸ ಮಂಗಳೂರು ಬಂದರು ರಸ್ತೆಯ ಸುರತ್ಕಲ್ ಟೋಲ್ ಪ್ಲಾಜಾ (NITK ಹತ್ತಿರ, NH-66 ರ ಕ್ಯಾಂಪಸ್) ವಿಲೀನಕ್ಕೆ ಅನುಮೋದನೆ ನೀಡಿದೆ. ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನ (ಟೋಲ್) ಯೋಜನೆಯ ಅಡಿಯಲ್ಲಿ ಬರುವ NH-66 ರ ಸುರತ್ಕಲ್ ಟೋಲ್ ಗೇಟಿನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾದಿಂದ ಸಂಗ್ರಹಿಸಲಾಗುತ್ತದೆ" ಎಂದು ಸುತ್ತೋಲೆ ಹೇಳಿದೆ.
ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಕೇಳಿಕೊಂಡಿದೆ. ಪೊಲೀಸ್ ರಕ್ಷಣೆ ಸೇರಿದಂತೆ ಅಗತ್ಯ ಜಿಲ್ಲಾಡಳಿತದ ನೆರವು ಹಾಗೂ ಬೆಂಬಲವನ್ನು ಒದಗಿಸುವಂತೆ ಸುತ್ತೋಲೆಯಲ್ಲಿ ಕೋರಲಾಗಿದೆ.
ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಂದು ಕಾರಿನ ಏಕಮುಖ ಪಾಸ್ ಗೆ 60 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೆಜಮಾಡಿ ಟೋಲ್ ಗೇಟ್ ನಲ್ಲಿ 40 ರೂ. ವಿಧಿಸಲಾಗುತ್ತಿತ್ತು. ಇತ್ತೀಚಿನ ಸುತ್ತೋಲೆಯ ನಂತರ, ಹೆಜಮಾಡಿ ಟೋಲ್ ಗೇಟ್‌ನಲ್ಲಿ ಏಕಮುಖ ಪಾಸ್‌ಗೆ ರೂ. 100 ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ, ಬಸ್‌ಗಳು ಮತ್ತು ಟ್ರಕ್‌ಗಳಿಗೆ ಸುರತ್ಕಲ್ ಟೋಲ್ ಗೇಟ್ ನಲ್ಲಿ 210 ರೂ. ಹೆಜಮಾಡಿ ಟೋಲ್ ಗೇಟ್‌ನಲ್ಲಿ 145 ರೂ. ವಿಧಿಸಲಾಗುತ್ತಿತ್ತು. ಪರಿಷ್ಕೃತಗೊಂಡ ಬಳಿಕ ರೂ. 355 ವಿಧಿಸಲಾಗುತ್ತಿದೆ.
ಭಾರೀ ನಿರ್ಮಾಣ ಯಂತ್ರೋಪಕರಣಗಳು, ಬೃಹತ್ ಉಪಕರಣಗಳು ಮತ್ತು ಮಲ್ಟಿಆಕ್ಸಲ್ ವಾಹನಗಳಿಗೆ ರೂ. ಸುರತ್ಕಲ್ ಟೋಲ್ ನಲ್ಲಿ 325 ರೂ., ಹೆಜಮಾಡಿ ಟೋಲ್‌ನಲ್ಲಿ 225, ವಿಧೀಸಲಾಗುತ್ತಿದ್ದರೆ ಇದೀಗ ಅದನ್ನು ರೂ. ಹೆಜಮಾಡಿ ಟೋಲ್ ಗೇಟ್ ನಲ್ಲಿ 550 ರೂ. ವಿಧಿಸಲಾಗುತ್ತಿದೆ.
ಲಘು ವಾಣಿಜ್ಯ ಮತ್ತು ಲಘು ಸರಕು ವಾಹನಗಳಿಗೆ ಸುರತ್ಕಲ್ ಟೋಲ್ ನಲ್ಲಿ 100 ರೂ. ಹೆಜಮಾಡಿ ಟೋಲ್‌ನಲ್ಲಿ 70 ರೂ. ವಿಧಿಸಲಾಗುತ್ತಿತ್ತು. ಪ್ರಸ್ತುತ ಬದಲಾವಣೆ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ 170 ರೂ ವಿಧಿಸಲಾಗುತ್ತಿದೆ ಎಂದು ಸುತ್ತೋಲೆ ಹೇಳಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡಿಜಿಎಂ ಮತ್ತು ಯೋಜನಾ ನಿರ್ದೇಶಕ ಎಚ್.ಎಸ್.ಲಿಂಗೇಗೌಡ ಉಡುಪಿ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಎನ್‌ಎಂಪಿ ರೋಡ್ ಕನೆಕ್ಟಿವಿಟಿ ರಸ್ತೆಯ ಸುರತ್ಕಲ್‌ನ ಟೋಲ್‌ಗೇಟ್ ಜೊತೆಗೆ ನವಯುಗದವರ ಹೆಜಮಾಡಿ ಟೋಲ್‌ಗೇಟ್ ವಿಲೀನಗೊಳಿಸಲಾಗಿದೆ. ಅದರಂತೆ ಸುರತ್ಕಲ್‌ನ ಟೋಲ್ ಶುಲ್ಕವನ್ನು ಹೆಜಮಾಡಿ ಜೊತೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಟೋಲ್ ಶುಲ್ಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜೊತೆಗಿನ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ತುಳುನಾಡ ಜನತೆಗೆ ಬಿಜೆಪಿ ನೀಡಿರುವ ಬಹುಮಾನ: ಹೋರಾಟ ಸಮಿತಿ ವ್ಯಂಗ್ಯ
ಇದು ತುಳುನಾಡಿನ ಜನತೆಗೆ ಬಿಜೆಪಿ ನೀಡಿರುವ ಬಹುಮಾನವಾಗಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರತ್ಕಲ್ ಟೋಲ್‌ಗೇಟ್‌ಗೆ ಸಂಬಂಧಿಸಿ ಹೊರಡಿಸಿದ ಸುತ್ತೋಲೆಯ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು ‘ಜನ ವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸಂಗ್ರಹಿಸಲು (ಸುಲಿಗೆ ನಡೆಸಲು) ಹೆದ್ದಾರಿ ಪ್ರಾಧಿಕಾರ ಮುಂದಾಗಿವೆ. ಈಗ ಹೆಜಮಾಡಿಯಲ್ಲಿ ಕಾರಿನ ಟೋಲ್ ದರ ಏಕಮುಖ ಸಂಚಾರಕ್ಕೆ 40 ರೂ. ಇದ್ದುದು ಇನ್ನೀಗ 100 ರೂ.ಆಗಲಿದೆ. ಅತ್ಯಂತ ಕೆಟ್ಟ, ಜನ ವಿರೋಧಿ ನಿರ್ಧಾರ ಇದಾಗಿದೆ. ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸವಾಗಿದೆ. ಏಳು ವರ್ಷಗಳ ಕಾಲ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿಗೆ ಬೆಲೆಯೇ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಜನರ ಭಾವನೆ, ಕಷ್ಟ ಸುಖಗಳ ಬಗ್ಗೆ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ ಟೋಲ್ ಕಂಪೆನಿಯ ಹಿತ ಮಾತ್ರ ಜನಪ್ರತಿನಿಧಿಗಳಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು. ಅವಿಭಜಿತ ಜಿಲ್ಲೆಯ ಜನ ಏಕಧ್ವನಿಯಾಗಿ ಈ ಅತ್ಯಂತ ಕೆಟ್ಟ ನಿರ್ಧಾರವನ್ನು ದೃಢವಾಗಿ ವಿರೋಧಿಸಬೇಕು. ಬಿಜೆಪಿ ಸಂಸದ, ಶಾಸಕರಿಗೆ ಆಡಳಿತ ನಡೆಸುವ ಯಾವುದೇ ಅನುಭವ ಇಲ್ಲ ಎಂಬುದು ಈಗ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಯಿತು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.