ಅಸಾಂಕ್ರಾಮಿಕ ರೋಗ ನಿಯಂತ್ರಣ ತರಬೇತಿ ಶಿಬಿರ

ಮಣಿಪಾಲ : ಜಿಲ್ಲಾ ಸರ್ವೇಕ್ಷಣಾ ಘಟಕ, ಅಸಾಂಕ್ರಾಮಿಕ ರೋಗ ತಡೆ ಘಟಕ ಹಾಗೂ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಉಡುಪಿ ಜಿಲ್ಲೆಯ ಅಸಾಂಕ್ರಾಮಿಕ ರೋಗಗಲ ತಡೆಗಟ್ಟುವ ಹಾಗೂ ನಿಯಂತ್ರಣದ ಕುರಿತಂತೆ ಮೂರು ದಿನಗಳ ಕಾರ್ಯಾಗಾರವೊಂದು ಬುಧವಾರ ಮಾಹೆಯ ಇಂಟರ್ಯಾಕ್ಟ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಸಾಂಕ್ರಾಮಿಕ ಕಾಯಿಲೆಗಳ ಅಪಾಯಕಾರಿ ಅಂಶ ಹಾಗೂ ಕಾಯಿಲೆ ನಿರ್ವಹಣೆ ಬಗ್ಗೆ ಪ್ರತಿ ಮನೆ ಮನೆಗೂ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದರು.
ಕೆಎಂಸಿಯ ಡೀನ್ ಡಾ. ಶರತ್ ಕೆ ರಾವ್ ಮಾತನಾಡಿ ಸಮಾಜಕ್ಕೆ ಹತ್ತಿರ ಇರುವ ವೈದ್ಯಕೀಯ ತಂಡಗಳಿಂದ ಈ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾದ್ಯ. ರೋಗವನ್ನು ಶೀಘ್ರ ಪತ್ತೆ ಹಚ್ಚಿ ನಿರ್ವಹಣೆ ಬಗ್ಗೆ ಕಳಕಳಿ ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಶಾಸ್ತ್ರಿ ಮಾತನಾಡಿ ತರಬೇತಿ ಹೊಂದಿದ ಸೇವೆಯು ಪ್ರತಿಯೊಬ್ಬ ನಾಗರಿಕನಿಗೂ ನಗು ಮುಖದೊಂದಿಗೆ ಸಿಗುವಂತಾಗಲಿ ಎಂದು ಹಾರೈಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಸಮುದಾಯ ಆರೋಗ್ಯ ವಿಭಾಗ ಮತ್ತು ಸರಕಾರದ ಆರೋಗ್ಯ ಇಲಾಖೆಗಳ ನಡುವಿನ ಪರಸ್ಪರ ಸಹಕಾರದಿಂದ ಈ ಆಸಾಂಕ್ರಾಮಿಕ ರೋಗವನ್ನು ಖಂಡಿತವಾಗಿಯೂ ನಿಯಂತ್ರಿಸಬಹುದು ಎಂದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ಈ ಶಿಬಿರದ ಸಂಯೋಜಕ ಡಾ.ಅಶ್ವಿನಿ ಕುಮಾರ್ ಮಾತನಾಡಿ, ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಸಿರುವ 300 ಕ್ಕೂ ಅಧಿಕ ತರಬೇತಿ ಹೊಂದಿದ ವೈದ್ಯರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಪ್ರಯೋಗ ತಂತ್ರಜ್ಞರು, ಫಿಸಿಯೋಥೆರಪಿಸ್ಟ್‌ಗಳು, ಆಪ್ತಸಮಾಲೋಚಕರು ತಂಡತಂಡಗಳಲ್ಲಿ ಕೆಲಸ ಮಾಡಿ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಸಾಂಕ್ರಾಮಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯ, ರಕ್ತನಾಳ ಸಂಬಂಧಿ ಕಾಯಿಲೆಗಳು, ಡಯಾಬಿಟಿಸ್‌ನ್ನು ನಿಯಂತ್ರಣಕ್ಕೆ ತರಲು ಸಾದ್ಯ ಎಂದು ಒತ್ತಿ ಹೇಳಿದರು.
ಸಮುದಾಯ ವೈದ್ಯಕೀಯ ವಿಭಾಗದ ಡಾ.ರಂಜಿತಾ ಶೆಟ್ಟಿ ವಂದಿಸಿದರೆ, ಡಾ.ಅಫ್ರೋಜ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸರ್ವೆಕ್ಷಣಾ ಕಚೇರಿಯ ಡಾ.ಅಂಜಲಿ ಕಾರ್ಯಕ್ರಮ ಸಂಯೋಜಿಸಿದರು.