ಕಠಿಣ ಪರಿಶ್ರಮ ಶ್ರದ್ಧೆಯಿಂದ ಯಶಸ್ಸು ಸಾಧ್ಯ: ಮುಹಮ್ಮದ್ ಮೊಹ್ಸಿನ್
ಬೆಂಗಳೂರು, ನ. 24: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಯಶಸ್ಸುಗಳಿಸಲು ಸಾಧ್ಯ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕಂದಾಯ ಇಲಾಖೆ ವಿಶೇಷ ಆಯುಕ್ತ ಮುಹಮ್ಮದ್ ಮೊಹ್ಸಿನ್ ತಿಳಿಸಿದರು.
ಗುರುವಾರ ವಸಂತ ನಗರದಲ್ಲಿರುವ ಮೌಲಾನ ಅಬುಲ್ ಕಲಾಂ ಆಝಾದ್ ಭವನದಲ್ಲಿ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ‘ರಕ್ಷಣಾ ಸೇವೆಗಳ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕುರ್‍ಆನ್ ಕಂಠಪಾಠ ಮಾಡುವ ಸಾಮಥ್ರ್ಯವಿರುವ ಮಕ್ಕಳು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಲು ಹೇಗೆ ಸಾಧ್ಯ? ಆದುದರಿಂದ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು.
ಇವತ್ತು ಸುಮಾರು 350ಕ್ಕಿಂತ ಹೆಚ್ಚು ಅವಕಾಶಗಳು ನಮ್ಮ ಮುಂದಿವೆ. ಆದರೆ, 20-25 ಅವಕಾಶಗಳ ಬಗ್ಗೆಯಷ್ಟೆ ನಮಗೆ ತಿಳಿದಿದೆ. ಸರಕಾರ ಪ್ರಿ ಮೆಟ್ರಿಕ್ ಇಂದ ಪಿಎಚ್‍ಡಿ ವರೆಗೆ ವಿದ್ಯಾರ್ಥಿವೇತನದ ಮೂಲಕ ಸಹಾಯ ಮಾಡುತ್ತಿದೆ. ಮಸೀದಿಗಳು ಮಾಹಿತಿ ಕೇಂದ್ರಗಳಾಗಬೇಕು. ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಕರು ಮಕ್ಕಳು ಹಾಗೂ ಪೋಷಕರಿಗೆ ವಿದ್ಯಾರ್ಥಿವೇತನದ ಕುರಿತು ಮಾಹಿತಿ ಒದಗಿಸಬೇಕು ಎಂದು ಅವರು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ವಕ್ಫ್ ಬೋರ್ಡ್ ಜಾಗದಲ್ಲಿ ಇಂಡಿಯಾ ಬಿಲ್ಡರ್ಸ್‍ನ ಝಿಯಾವುಲ್ಲಾ ಶರೀಫ್ 15 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಿಕೊಡುತ್ತಿದ್ದು, ಅದರ ನಿರ್ವಹಣೆಗೆ 10 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ನಾಗರಿಕ ಸೇವೆ ಸೇರಿದಂತೆ ಯಾವುದೆ ಹುದ್ದೆಗೂ ಹೋದರೂ ಸಮುದಾಯ, ಸಮಾಜ, ರಾಜ್ಯ ಹಾಗೂ ದೇಶಕ್ಕೆ ಸೇವೆ ಸಲ್ಲಿಸುವ ಸಂಕಲ್ಪದಿಂದ ವಿಮುಖರಾಗಬಾರದು. ಇದೇ ರೀತಿಯ ಕಾರ್ಯಾಗಾರವನ್ನು ಡಿಸೆಂಬರ್ ತಿಂಗಳಲ್ಲಿ ಪ್ರತಿಯೊಂದು ವಿಭಾಗದಲ್ಲಿ ಹಾಗೂ ಜನವರಿ ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಪುಣೆಯ ಅನೀಸ್ ಡಿಫೆನ್ಸ್ ಕರಿಯರ್ ಇನ್ಸ್‍ಟಿಟ್ಯೂಟ್(ಎಡಿಸಿಐ) ಸಂಸ್ಥಾಪಕ ಅನೀಸ್ ಕುಟ್ಟಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಹಾಗೂ ರಕ್ಷಣಾ ಇಲಾಖೆಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದರು. ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖಾನ್ ಪರ್ವೇಝ್, ಸದಸ್ಯ ಜಿ.ಯಾಕೂಬ್ ಉಪಸ್ಥಿತರಿದ್ದರು.
-------------------------
‘ರಾಜ್ಯ ವಕ್ಫ್ ಮಂಡಳಿಯು ಕೇಂದ್ರ ರಕ್ಷಣಾ ಸಚಿವಾಲಯದ ಆಶ್ರಯದಲ್ಲಿ ನಡೆಯುವ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡುವ ಕಾರ್ಯಾಗಾರವನ್ನು ಏರ್ಪಡಿಸಿರುವುದು ಸಂತಸದ ಸಂಗತಿ. ಇದು ರಕ್ಷಣಾ ಇಲಾಖೆಯ ಪರೀಕ್ಷೆಗಳಲ್ಲಿ ಉನ್ನತಿ ಸಾಧಿಸಲು ನಮ್ಮ ರಾಜ್ಯದ ಯುವ ಜನತೆಗೆ ಹೆಚ್ಚಿನ ಸಹಕಾರವಾಗಲಿದೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕಳುಹಿಸಿದ್ದ ಲಿಖಿತ ಸಂದೇಶವನ್ನು ಅವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ ಓದಿದರು.