ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ ಹಂಚಿಕೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ನ.24: ಬಿಬಿಎಂಪಿ ವ್ಯಾಪ್ತಿಯ ಹುಳಿಮಾವು ವಾರ್ಡ್‍ನ ಕೆಲ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಸಿರುವುದನ್ನು ಪ್ರಶ್ನಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್, ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್‍ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ರಾಜ್ಯ ಚುನಾವಣಾ ಆಯೋಗ ಸೇರಿ ಆರು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಮೇಲ್ಮನವಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅವರು, ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7(1)(ಬಿ) ಪ್ರಕಾರ ಒಂದು ವಾರ್ಡ್‍ಗೆ ಸೇರಿದ ಪ್ರದೇಶಗಳನ್ನು ಒಂದು ವಿಧಾನಸಭೆ ಚುನಾವಣಾ ಕ್ಷೇತ್ರದೊಳಗೇ ಸೇರಿಸಬೇಕು. ಆದರೆ, ಹುಳಿಮಾವು ವಾರ್ಡ್‍ನ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಸಂಬಂಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಏಕಸದಸ್ಯ ಪೀಠ ಮಾನ್ಯ ಮಾಡಿಲ್ಲ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹುಳಿಮಾವು ಸೇರಿ ಈ ಹಿಂದೆ ಇದ್ದ 14 ವಾರ್ಡ್‍ಗಳ ಜತೆಗೆ ಹೆಚ್ಚುವರಿಯಾಗಿ 6 ವಾರ್ಡ್‍ಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಹುಳಿಮಾವು ವಾರ್ಡ್‍ಗೆ ಸೇರಿದ ಅಕ್ಷಯ ಗಾರ್ಡನ್, ಸತ್ಯಸಾಯಿ, ಶಿರಡಿ ಸಾಯಿ ನಗರ, ವಿಐಪಿ ಲೇ ಔಟ್ ಮತ್ತಿತರೆ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದೊಂದಿಗೆ ಹಂಚಿಕೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.







