ಹುಬ್ಬಳ್ಳಿ | ಹೆಸ್ಕಾಂ ಗುತ್ತಿಗೆ ಕಾಮಗಾರಿಯಲ್ಲಿ ಕಮಿಷನ್ ಆರೋಪ: ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರರ ಸಂಘ
ಹುಬ್ಬಳ್ಳಿ: ರಾಜ್ಯ ಸರ್ಕಾರ ಮತ್ತು ಹೆಸ್ಕಾಮ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ನೂರಾರು ಕೋಟಿ ರೂಪಾಯಿ ಗುತ್ತಿಗೆ ಕಾಮಗಾರಿಯಲ್ಲಿ ಶೇ. 25 ಕಮೀಷನ್ ದಂಧೆ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಅನುಮತಿ ಪಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ದೂರು ಸಲ್ಲಿಸಿ, ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
''ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ವಿವಿಧ ಕಾಮಗಾರಿಗಳಿಗೆ 472 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ರೈತರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹೆಚ್ಟಿ ಲೈನ್ ಮತ್ತು ಎಲ್ಟಿ ಲೈನ್ ನಿರ್ಮಿಸುವುದು ಹಾಗೂ ಲಿಂಕ್ಲೈನ್ ಕಾಮಗಾರಿಗೆ 34 ಲಾಟ್ಗಳಲ್ಲಿ ಟೆಂಡರ್ ನೀಡಲಾಗಿದೆ. ಆದರೆ ಲಂಚ ನೀಡುವವರಿಗೆ ಅನುಕೂಲ ಮಾಡಲು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಟೆಂಡರ್ ರೂಪಿಸಿ ಭ್ರಷ್ಟಾಚಾರ ಮಾಡಲಾಗಿದೆ'' ಎಂದು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪಿಸಿದ್ದಾರೆ.
''HESCOM ಎಮ್ಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆಪ್ತ ಗುತ್ತಿಗೆದಾರರಿಂದ ಲಂಚ ಪಡೆದು ಕೋಟ್ಯಂತರ ರೂಪಾಯಿ ಕಾಮಗಾರಿ ಮಂಜೂರು ಮಾಡಲಾಗಿದೆ'' ಎಂದು ದೂರಲಾಗಿದೆ.