ಆಮ್ ಆದ್ಮಿ ಪಕ್ಷದ ಮುಖಂಡ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ; ತನಿಖೆಗೆ ಆಗ್ರಹಿಸಿದ ಬಿಜೆಪಿ

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಪಶ್ಚಿಮ ದಿಲ್ಲಿಯ ರಾಜೌರಿ ಗಾರ್ಡನ್‌ನಲ್ಲಿರುವ ತನ್ನ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತನ್ನ ಪಕ್ಷದ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಬಿಜೆಪಿ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದೆ.
55 ವರ್ಷದ ಸಂದೀಪ್ ಭಾರದ್ವಾಜ್ ಎಂದು ಗುರುತಿಸಲಾದ ವ್ಯಕ್ತಿಯ ಶವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕ್ರೈಮ್ ಟೀಮ್ ಅನ್ನು ಕರೆಸಲಾಯಿತು. ಈ ವ್ಯಕ್ತಿ ಭಾರದ್ವಾಜ್ ಮಾರ್ಬಲ್ಸ್ ಮಾಲಕನಾಗಿದ್ದು, ವಿಚ್ಛೇದನ ಪಡೆದಿದ್ದರು. ಆತನ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರದ್ವಾಜ್ ಅವರ ಹಠಾತ್ ಆತ್ಮಹತ್ಯೆಯ ವರದಿಯು ದಿಲ್ಲಿಯ ಜನರನ್ನು ವಿಶೇಷವಾಗಿ ಮೋತಿ ನಗರ ವಿಧಾನಸಭಾ ಕ್ಷೇತ್ರದ ಜನರನ್ನು ಬೆಚ್ಚಿಬೀಳಿಸಿದೆ ಎಂದು ದಿಲ್ಲಿಯ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.





