ರಾಜ್ಯದ ಗಡಿ, ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ: ಬೊಮ್ಮಾಯಿ
ಬೆಂಗಳೂರು: ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯ ನಮ್ಮ ಕಡೆಯಿದೆ. ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮಹಾರಾಷ್ಟ್ರ ಕ್ರಮ ವಹಿಸಬೇಕು: ಭಾರತ ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ರಾಜ್ಯಗಳನ್ನು ರಾಜ್ಯ ಮರುವಿಂಗಡನಾ ಕಾಯ್ದೆಯಡಿ ರಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯವಾಗಿದ್ದು, ರಾಜ್ಯಗಳ ನಡುವೆ ಶಾಂತಿ ಕಾಯ್ದುಕೊಳ್ಳಬೇಕಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕ್ರಮಕೈಗೊಂಡು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ನಾವು ಕಾನೂನು ಪಾಲಿಸುವವರಾಗಿದ್ದು, ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರ 2004ರಲ್ಲಿ ಪ್ರಕರಣ ದಾಖಲಿಸಿತ್ತು. ನಾವು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ ಎಂದರು.
ಕಾನೂನು ಹೋರಾಟಕ್ಕೆ ಆದ್ಯತೆ:
ನಮ್ಮ ಮೊದಲ ಆದ್ಯತೆ ಕಾನೂನಾತ್ಮಕ ಹೋರಾಟ ಮಾಡುವುದಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ಅದರ ತೀರ್ಪಿಗಾಗಿ ಕಾಯಬೇಕು. ಪ್ರಕರಣವು ಅದರ ಅರ್ಜಿಯ ಅರ್ಹತೆಯ ಮೇಲೆ ನಿಂತಿಲ್ಲ, ಬದಲಾಗಿ ಮೆಂಟೇನಬಿಲಿಟಿ ಆಧಾರದ ಮೇಲೆ ನಿಂತಿದೆ. ಕಲಂ 3 ಕೂಡ ಬಹಳ ಸ್ಪಷ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಒಂದು ನಿರ್ಣಯಕ್ಕೆ ಬರಬೇಕಿದೆ ಎಂದರು. ಮುಂದಿನ ವಾರದಲ್ಲಿ ಸರ್ವ ಪಕ್ಷ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.