ಮಹಿಳೆಯರ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಪ್ರಮುಖ: ಡಾ.ಕಿಶೋರ್ ಕುಮಾರ್

ಕೊಣಾಜೆ: ಇಂದಿನ ಆಧುನಿಕ ಕಾಲಘಟದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಅವಕಾಶ ಪ್ರಾತಿನಿಧ್ಯ ದೊರೆತರೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹೆಣ್ಮಕ್ಕಳ ಅಭಿವೃದ್ಧಿ, ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದುದು ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ.ಅವರು ಹೇಳಿದರು.
ಅವರು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆಯ ಅಂಗವಾಗಿ ಅಸೈಗೋಳಿಯಲ್ಲಿ ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ, ಕೊಣಾಜೆ ಗ್ರಾಮ ಪಂಚಾಯತಿ, ರೋಟರಿ ಕ್ಲಬ್ ದೇರಳಕಟ್ಟೆ, ಡೀಡ್ಸ್ ಮಂಗಳೂರು ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಏಕತಾ ಸಪ್ತಾಹ- ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಣತೆ ವಹಿಸಿ ಮಾತನಾಡಿದರು.
ಮಹಿಳೆಯರ ಸಮಸ್ಯೆಗಳು ಕಡಿಮೆಯಾದರೆ ಇಡೀ ಸಮಾಜದ ಸಮಸ್ಯೆಗಳು ಕಡಿಮೆಯಾದಂತೆ. ನಮ್ಮ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಬೆಳೆಸಿಕೊಂಡು ಸಮಾನತೆಯ ಸಮಾಜವನ್ನು ಕಟ್ಟೋಣ ಎಂದರು.
ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಅನಿತಾ ರವಿಶಂಕರ್ ಅವರು ವಿಶೇಷ ಉಪನ್ಯಾಸ ನೀಡಿ, ದೇಶದ ಅಭಿವೃದ್ಧಿಯಲ್ಲಿ ಲಿಂಗತ್ವ ಸಮಾನತೆಯು ಪ್ರಮುಖ ಪಾತ್ರವಹಿಸುತ್ತದೆ. ಲಿಂಗತ್ವ ಅಸಮಾನತೆಯಿಂದಲೇ ಇಂದು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಮುಂದುವರಿಯುತ್ತಿದೆ. ಮಹಿಳೆಯರ ಸಮಸ್ಯೆ ಮಹಿಳೆಯರದ್ದು ಮಾತ್ರ ಅಲ್ಲ ಆ ಸಮಸ್ಯೆ ಇಡೀ ಸಮಾಜದ್ದಾಗಿದೆ ಎಂದರು.
ಕೊಣಾಜೆ ಪಂ. ಅಧ್ಯಕ್ಷರಾದ ಚಂಚಲಾಕ್ಷಿ ಅವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಇಂದು ಲೈಂಗಿಕ ದೌರ್ಜನ್ಯಗಳು ಹೆಚ್ಷುತ್ತಿರುವುದು ಆತಂಕಕಾರಿಯಾದ ಸಂಗತಿಯಾಗಿದೆ. ಈ ಭಾಗದಲ್ಲೂ ಮಹಿಳಾ ಠಾಣೆಯು ನಿರ್ಮಾಣವಾಗುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಣರಾದ ಅನುಸೂಯ ಆರ್ ಶೆಟ್ಟಿ, ವಿದ್ಯಾರತ್ನ ಶಾಲೆಯ ಸೌಮ್ಯಾ ಆರ್ ಶೆಟ್ಟಿ, ಕೊಣಾಜೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಯೋಗೇಶ್ವರ್ ಪಿ. ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ರವಿಶಂಕರ್ ಅವರು ಸ್ವಾಗತಿಸಿ, ನಿರೂಪಿಸಿದರು. ಲಯನ್ಸ್ ಕ್ಲಬ್ ನ ಪ್ರಸಾದ್ ರೈ ಕಲ್ಲಿಮಾರ್ ವಂದಿಸಿದರು.