ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಗಂಭೀರ ಚಿಂತನೆ: ಸಿಎಂ ಬೊಮ್ಮಾಯಿ
ಶಿವಮೊಗ್ಗ, ನ.25: ''ಏಕರೂಪ ನಾಗರಿಕ ಸಂಹಿತೆ(ಯುಸಿಸಿ ) ಬಗ್ಗೆ ದೀನ ದಯಾಳರ ಕಾಲದಿಂದಲೂ ನಾವು ಹೇಳಿಕೊಂಡು ಬರುತ್ತಿದ್ದೇವೆ. ಇದರ ಬಗ್ಗೆ ಈಗ ರಾಜ್ಯಸರ್ಕಾರ ಗಟ್ಟಿ ಚಿಂತನೆ ಮಾಡುತ್ತಿದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬಿಜೆಪಿ ಪಕ್ಷವು ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಕಾಂಗ್ರೆಸ್ ನವರು ದಾಸ್ಯ ಸಂಸ್ಕೃತಿ ಯವರು. ತಾವೂ ಮಾಡುವುದಿಲ್ಲ ಬೇರೆಯವರಿಗೂ ಮಾಡಲು ಬಿಡುವುದಿಲ್ಲ.ಜನರು ಶಿಕ್ಷಣ ಪಡೆಯುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ. ಅವರಿಗೆ ಉಳಿದವರು ದಾಸ್ಯದಲ್ಲೇ ಇರಬೇಕು ಎನ್ನುವ ಮನಸ್ಥಿತಿ' ಎಂದು ಟೀಕಿಸಿದ್ದಾರೆ.
''ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ.ಸಿದ್ದಾಂತ, ಮೌಲ್ಯಗಳಿಗೆ ಬಿಜೆಪಿ ಯಾವತ್ತೂ ಕಾಂಪ್ರಮೈಸ್ ಆಗುವುದಿಲ್ಲ. ಮೊದಲು ದೇಶ, ನಂತರ ಪಕ್ಷ ಎಂಬ ಧ್ಯೇಯವನ್ನು ಬಿಜೆಪಿ ಪಕ್ಷ ಹೊಂದಿದೆ'' ಎಂದರು.
''ಬಿಜೆಪಿ ಬಗ್ಗೆ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಜನರಿಗೆ ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಸಂವಿಧಾನದ ಆಶಯ ಈಡೇರಿಸುವುದು ಬಿಜೆಪಿ ಆದ್ಯತೆ ಎಂದ ಅವರು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎಂಬುದು ಈಗ ಇತಿಹಾಸ. ಈಗ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅವರಿಗೆ ಅಧಿಕಾರವೇ ಮಖ್ಯ. ಕಾಂಗ್ರೆಸ್ ತನ್ನ ಸಿದ್ದಾಂತ, ನೀತಿಗೆ ಅಂಟಿಕೊಂಡು ರಾಜಕಾರಣ ಮಾಡಿಲ್ಲ'' ಎಂದು ಹೇಳಿದರು.
''ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಕೂಡ ಉಜ್ವಲ ಯೋಜನೆ ಜಾರಿ ತಂದಿದೆ. ಪ್ರತಿ ಮನೆಗೆ ಶುದ್ಧನೀರು ಪೂರೈಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಇದೆ.ಆದರೆ ಭಾರತ ಜಿಡಿಪಿಯಲ್ಲಿ ನಿಯಂತ್ರಣ ಹೊಂದಿದೆ. ಜಿಡಿಪಿ ೭% ಬೆಳವಣಿಗೆ ಕಾಣುತ್ತಿದೆ. ಆರ್ಥಿಕವಾಗಿ ಭಾರತ ಪ್ರಗತಿ ಸಾಧಿಸುತ್ತಿದೆ'' ಎಂದರು.
''ಮೋದಿ ಸರ್ಕಾರದ ದಾರಿಯಲ್ಲಿ ರಾಜ್ಯ ಸರ್ಕಾರ ಸಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೇವೆ. ಯಡಿಯೂರಪ್ಪ ಅವರು ಮಾದರಿ ನಿರ್ವಹಣೆ ಮಾಡಿ ತೋರಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ತೆರಿಗೆ ನಿರ್ವಹಣೆಯಲ್ಲಿ ಹಿನ್ನಡೆಯಿತ್ತು. ಈಗ ಗುರಿ ಮಿರಿ ತೆರಿಗೆ ಸಂಗ್ರಹಣೆ ಆಗಿದೆ'' ಎಂದರು.
''ಗೋ ಹತ್ಯೆ ನಿಷೇಧ ಮಾಡಿದ್ದೇವೆ. ಪುಣ್ಯಕೋಟಿ ವಿಶೇಷ ಯೋಜನೆಯಡಿ ಗೋವಿನ ಸಂತತಿ ರಕ್ಷಣೆ ಹಾಗೂ ಗೋಶಾಲೆಗಳ ನಿರ್ಮಾಣಕ್ಕೆ ಸರ್ಕಾರಿ ನೌಕರರ ಸಂಘದವರು ಮುಂದೆ ಬಂದು ಡೊನೇಷನ್ ಕೊಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ಇದಕ್ಕೂ ಟೀಕೆ ಮಾಡುತ್ತಾರೆ. ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ನಾವೂ ಸಾರ್ವಜನಿಕರಿಗೂ ಅವಕಾಶ ನೀಡಿದ್ದೇವೆ'' ಎಂದರು.
''ಮತಾಂತರ ಕಾಯ್ದೆ ಬಗ್ಗೆ ವಿರೋಧ ಪಕ್ಷದವರು ದಿನಗಟ್ಟಲೇ ಮಾತನಾಡಿದರು. ಒತ್ತಾಯ ಪೂರ್ವಕ ಮತಾಂತರ ಮಾಡುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ನಮ್ಮ ಗಟ್ಟಿ ನಿರ್ಧಾರ ಜನರಿಗೆ ಹಲವು ಅನುಕೂಲ ಮಾಡಿಕೊಟ್ಟಿದೆ'' ಎಂದು ಹೇಳಿದರು.
ಚುನಾವಣೆಗೆ ಸಿದ್ಧರಾಗಲು ಕರೆ: ಪಕ್ಷದ ನಾಯಕರು,ಕಾರ್ಯಕರ್ತರು ಚುನಾವಣೆಗೆ ಸಿದ್ದರಾಗಬೇಕು ಎಂದು ಕರೆ ನೀಡಿದ ಸಿಎಂ, ನಮ್ಮ ಸರ್ಕಾರದ ಯೋಜನೆಗಳನ್ನು ಮುಂದೆ ಇಟ್ಟುಕೊಂಡು ಜನರ ಮುಂದೆ ಹೋಗ ಬೇಕು. ಪೂರ್ವ ಪ್ರಮಾಣದ ಸರ್ಕಾರ ಬರಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತಿತರು ಉಪಸ್ಥಿತರಿದ್ದರು.