ಕಲಬುರಗಿಯಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್‌ಗಳಿಗೆ ಮಸಿ ಬಳಿದು ಕನ್ನಡಿಗರ ಆಕ್ರೋಶ
ಕಲಬುರಗಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದ ಘಟನೆಯ ಬೆನ್ನಲ್ಲೇ ಶುಕ್ರವಾರ ಕಲಬುರಗಿಯ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು, ಅಫಜಲಪುರದಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಮಸಿಬಳಿದು, ಭಿತ್ತಿಪತ್ರಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಬೆಳಗಾವಿ, ಅಕ್ಕಲಕೋಟೆ, ಸೊಲ್ಲಾಪುರ, ಜತ್ ನಮ್ಮದೇ ಎಂದು ಭಿತ್ತಿಪತ್ರಗಳನ್ನು ಬಸ್‌ಗೆ ಅಂಟಿಸಿ ಹೋರಾಟಗಾರರು ಕನ್ನಡಪರ ಘೋಷಣೆಗಳನ್ನು ಹಾಕಿದ್ದಾರೆ.
''ಮಹಾರಾಷ್ಟ್ರ ಗಡಿ ವಿವಾದದ ನ್ಯಾಯಾಲಯದ ಮುಂದೆ ಇರುವಾಗ ಮಹಾರಾಷ್ಟ್ರ ತಕರಾರು ಎತ್ತಿರುವುದು ಖಂಡನೀಯ'' ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವೀಂದ್ರ ಜಮಾದಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಮಹಾರಾಷ್ಟ್ರ ಸರ್ಕಾರ ಪದೇ ಪದೇ ಗಡಿ ವಿಚಾರಕ್ಕೆ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಅಲ್ಲದೇ ನಮ್ಮ ಸಾರಿಗೆ ಬಸ್‌ಗಳಿಗೆ ಮಸಿ ಬಳಿಯವುದು ಸೇರಿದಂತೆ ಇತರೆ ಕೀಳು ಮಟ್ಟದ ಕೆಲಸಗಳನ್ನು ಮಾಡಿ ಕನ್ನಡಿಗರಿಗೆ ಅವಮಾನ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನಾವು ಸಹಿಸಿಕೊಳ್ಳುವುದಿಲ್ಲ. ಏಟಿಗೆ ಎದಿರೇಟು ನೀಡಲು ನಾವು ಸಿದ್ಧರಿದ್ದೇವೆ'' ಎಂದು ಎಚ್ಚರಿಸಿದ್ದಾರೆ.