ಡಿ.18ರಿಂದ ನೇತ್ರಾವತಿ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ

ಬೆಳ್ತಂಗಡಿ; ನೇತ್ರಾವತಿ ನದಿ ಮತ್ತು ಇತರ ಉಪನದಿಗಳಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ವಿರುದ್ಧ ಬೆಳ್ತಂಗಡಿಯಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನೇತೃತ್ವದ "ನೇತ್ರಾವತಿ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ಮುಂಡಾಜೆಯಿಂದ ಉಪ್ಪಿನಂಗಡಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಶನಿವಾರ ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಬೃಹತ್ ಸಮಾಲೋಚನಾ ಸಭೆ ನಡೆದು ಸಭೆಯಲ್ಲಿ ಡಿಸೆಂಬರ್ 18,19,20 ರಂದು ಮುಂಡಾಜೆಯ ಗಾಂಧಿ ಕಟ್ಟೆಯಿಂದ ಉಪ್ಪಿನಂಗಡಿ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಪ್ರಧಾನ ಸಂಚಾಲಕ ರಕ್ಷಿತ್ ಶಿವರಾಂ ಅವರು ಮಾತನಾಡಿ, " ನಮ್ಮ ಜಿಲ್ಲೆಯ ಜೀವನದಿ ನೇತ್ರಾವತಿಯ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರ ನಡೆಯುತ್ತಿರುವಾಗ ನಾವೆಲ್ಲಾ ಸುಮ್ಮನಿರುವುದು ಸರಿಯಲ್ಲ , ಇದರ ವಿರುದ್ಧ ಹೋರಾಟ ನಡೆಸುವುದು ನಮ್ಮ ಕರ್ತವ್ಯ. ಇದರ ಜೊತೆಗೆ ತಾಲೂಕಿನಲ್ಲಿ ಚಾಲ್ತಿಯಲ್ಲಿರುವ 40% ಕಮಿಷನ್, ವ್ಯಾಪಕ ಭ್ರಷ್ಟಾಚಾರ, ಅಕ್ರಮ-ಸಕ್ರಮ ಯೋಜನೆಯ ಪಕ್ಷಪಾತ ಧೋರಣೆ, ಕಸ್ತೂರಿರಂಗನ್ ವರದಿ ವಿರುದ್ಧ , ನಿವೇಶನ- ವಸತಿ ಸೌಕರ್ಯಕ್ಕಾಗಿ , ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಸಿಗಳಿಗೆ ಮೂಲಭೂತ ಸೌಕರ್ಯಗಳಿಗಾಗಿಯೂ ಈ ಹೋರಾಟ ನಡೆಯಲಿದೆ. ಇದೊಂದು ತಾಲೂಕಿನ ಐತಿಹಾಸಿಕ ಹೋರಾಟ , ಈ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದ ಅವರು ಈ ಕಾಲ್ನಡಿಗೆ ಜಾಥಾವನ್ನು ಯಶಸ್ವಿಗೊಳಿಸಲು ಗ್ರಾಮ ಗ್ರಾಮಗಳಲ್ಲಿ ಜನ ಸಂಘಟಿತರಾಗಿ ದುಡಿಯುವ ಅಗತ್ಯವಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಜಿ.ಪಂ ಮಾಜಿ ಸದಸ್ಯರಾದ ಪಿ ಧರಣೇಂದ್ರ ಕುಮಾರ್, ಕೆ.ಕೆ ಶಾಹುಲ್ ಹಮೀದ್ ಮಾತನಾಡಿದರು. ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಜನರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಸಂಚಾಲಕ ಶೇಖರ್ ಕುಕ್ಕೇಡಿ , ಜಿ.ಪಂ ಮಾಜಿ ಸದಸ್ಯೆ ನಮೀತಾ ಕೆ ಪೂಜಾರಿ ಉಪಸ್ಥಿತರಿದ್ದರು. ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.