ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ಪೂನಾವಾಲ ಸೋಗಿನಲ್ಲಿ 1 ಕೋಟಿ ರೂ. ದೋಚಿದ ಖದೀಮರು: 7 ಮಂದಿಯ ಬಂಧನ
ಪುಣೆ, ನ. 26: ಭಾರತದ ಪ್ರಮುಖ ಔಷಧಿ ತಯಾರಿಕಾ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ವಂಚಕರು 1.01 ಕೋಟಿ ರೂಪಾಯಿ ದೋಚಿರುವ ಪ್ರಕರಣವೊಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪುಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ನಿರ್ದೇಶಕರಲ್ಲಿ ಒಬ್ಬರಾಗಿರುವ ಸತೀಶ್ ದೇಶಪಾಂಡೆಗೆ ಈ ವರ್ಷದ ಸೆಪ್ಟಂಬರ್‌ನಲ್ಲಿ ತಾನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆದಾರ್ ಪೂನಾವಾಲ ಎಂಬುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದನ್ನು ಕಳುಹಿಸಿ, ಏಳು ವಿವಿಧ ಖಾತೆಗಳಿಗೆ ಹಣವನ್ನು ಕಳುಹಿಸುವಂತೆ ಸೂಚಿಸಿದನು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದೇಶವು ಆದಾರ್ ಪೂನಾವಾಲರಿಂದಲೇ ಬಂದಿದೆ ಎಂದು ನಂಬಿದ ಸತೀಶ್ ದೇಶಪಾಂಡೆ, ವ್ಯಕ್ತಿಯು ಹೇಳಿದ ಖಾತೆಗಳಿಗೆ ಒಟ್ಟು 1.01 ಕೋಟಿ ರೂಪಾಯಿಯನ್ನು ವರ್ಗಾಯಿಸಿದರು. ಕಂಪೆನಿಗೆ ವಂಚಿಸಲಾಗಿದೆ ಎನ್ನುವುದು ನಂತರವಷ್ಟೇ ಗೊತ್ತಾಯಿತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ವರ್ಗಾವಣೆಯಾಗಿರುವ 8 ಖಾತೆಗಳ ಮೇಲೆ ಗಮನ ಹರಿಸಿದರು.
‘‘ಈ ಏಳು ವ್ಯಕ್ತಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಅವರನ್ನು ದೇಶದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಆದರೆ, ವಂಚನೆಯ ಸೂತ್ರಧಾರಿ ತಪ್ಪಿಸಿಕೊಂಡಿದ್ದಾನೆ’’ ಎಂದು ಉಪ ಪೊಲೀಸ್ ಕಮಿಶನರ್ ಸ್ಮಾರ್ತನಾ ಪಾಟೀಲ್ ಹೇಳಿದರು. ಈ ಎಲ್ಲಾ ಖಾತೆಗಳನ್ನು ಹಾಗೂ ಈ ಖಾತೆಗಳಿಂದ ಮುಂದಕ್ಕೆ ಹಣ ವರ್ಗಾವಣೆಗೊಂಡ ಇತರ 40 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
‘‘ಈ ಖಾತೆಗಳಲ್ಲಿರುವ 13 ಲಕ್ಷ ರೂಪಾಯಿಯನ್ನು ಸ್ತಂಭನಗೊಳಿಸಿದ್ದೇವೆ’’ ಎಂದರು.







