ಗುಜರಾತ್ ಚುನಾವಣೆ: ಕೇವಲ 139 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ

ಅಹಮದಾಬಾದ್: ಗುಜರಾತ್ನಲ್ಲಿ ಶೇ 50 ರಷ್ಟು ಮತದಾರರು ಮಹಿಳೆಯರಿದ್ದರೂ, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚು ಉತ್ತೇಜನಕಾರಿಯಾಗಿಲ್ಲ. ಏಕೆಂದರೆ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ನಡೆಯುವ ಎರಡು ಹಂತದ ಚುನಾವಣೆಯಲ್ಲಿ ಒಟ್ಟು 1,621 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅವರಲ್ಲಿ ಕೇವಲ 139 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 56 ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಬೆರಳೆಣಿಕೆಯ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡುವ ಸಂಪ್ರದಾಯವನ್ನು ಮುಂದುವರೆಸಿವೆ. ಆದರೆ 2017 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. .
2017 ರಲ್ಲಿ 12 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದ ಬಿಜೆಪಿ ಈ ಬಾರಿ 18 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ 14 ಮಹಿಳೆಯರನ್ನು ಕಣಕ್ಕಿಳಿಸಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 10 ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಎರಡು ಪಕ್ಷಗಳು ಈ ಬಾರಿ ದಲಿತ ಹಾಗೂ ಬುಡಕಟ್ಟು ಸಮುದಾಯದ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿವೆ.
ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದಾಗ ಮಹಿಳಾ ಪ್ರಾತಿನಿಧ್ಯ ಹೆಚ್ಚಲಿದೆ ಎಂದು ವಡೋದರದ ಸಯಾಜಿಗುಂಜ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಮಿ ರಾವತ್ ಹೇಳಿದ್ದಾರೆ. ಆದರೆ ಬಿಜೆಪಿಯ ರಾಜ್ಯ ಮಹಿಳಾ ವಿಭಾಗದ ಮುಖ್ಯಸ್ಥೆ ದೀಪಿಕಾಬೆನ್ ಸರ್ವದಾ ಅವರು ತಮ್ಮ ಪಕ್ಷವು ಈಗಾಗಲೇ ಅಧ್ಯಕ್ಷ ಸ್ಥಾನ ಸೇರಿದಂತೆ ಮಹಿಳೆಯರಿಗೆ ಪ್ರಮುಖ ಹುದ್ದೆ ನೀಡಿದೆ ಎಂದು ಹೇಳಿದರು.







