ಸಿಎಂ ಬೊಮ್ಮಾಯಿ ತಮ್ಮ ಸಾಧನೆಯ ಶ್ವೇತಪತ್ರ ಹೊರಡಿಸಲಿ: ವಿ.ಎಸ್.ಉಗ್ರಪ್ಪ
ಹುಬ್ಬಳಿ, ನ. 27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಸಂಪೂರ್ಣ ವಿಫಲವಾಗಿದೆ. ಅವರು ಮಾಡಿದ ಈವರೆಗಿನ ಅಭಿವೃದ್ಧಿ ಕಾರ್ಯ ಶೂನ್ಯ. ಹೀಗಾಗಿ, ಅವರು ಮಾಡಿರುವ ಸಾಧನೆಯ ಕುರಿತಾಗಿ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ 150 ಸ್ಥಾನ ಗೆಲ್ಲುವ ಗುರಿಯನ್ನು ಕೊಟ್ಟಿದೆ ಎಂದು ಹುಮ್ಮಸ್ಸಿನಿಂದ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾಡಿದ ಸಾಧನೆ ಎಂದರೆ ಅದು, ಎಲ್ಲ ಇಲಾಖೆಯಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ವಿರೋಧಿ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿದೆ ಎಂದು ಆರೋಪಿಸಿದರು.
ಸರಕಾರದಲ್ಲಿ ಹೊಸದಾಗಿ ನೀರಾವರಿ ಯೋಜನೆ ಮಾಡಿಲ್ಲ. ಸರಕಾರ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿವೆ. ದೇಶದಲ್ಲಿ ಬಡತನ ಕಡಿಮೆ ಆಗಿಲ್ಲ. ಈ ಹಿಂದೆ ಹಸಿದವರ ಸಂಖ್ಯೆ 65 ಇದ್ದದ್ದು, ಇದೀಗ 107ನೆ ಸ್ಥಾನಕ್ಕೆ ಏರಿದೆ. ಇದೇ ಈ ಸರಕಾರದ ಸಾಧನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಸರಕಾರ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಿದ್ದನ್ನೇ ದೊಡ್ಡ ಸಾಧನೆ ಹಾಗೆ ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ದಾರೆ. ಬಿಜೆಪಿಗೆ ಸಾಮಾಜಿಕ ನ್ಯಾಯಕ್ಕೆ ಏನೂ ಸಂಬಂಧ?. ಇದೇ ಬಿಜೆಪಿ ಮುಖಂಡರು ಈ ಹಿಂದೆ ಸಂವಿಧಾನ ಕಿತ್ತು ಎಸೆಯುವಂತೆ ಮಾತನಾಡಿದ್ದರು. ಮೀಸಲಾತಿ ಕಿತ್ತು ಹಾಕಬೇಕೆಂದು ಆರೆಸ್ಸೆಸ್ಸ್ನ ಪ್ರಮುಖರು ಹೇಳಿದ್ದರು. ಆದರೆ ಕಾಂಗ್ರೆಸ್ ಹಿಂದೂ ವಿರೋಧಿಯಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷ ಎಂದರು.
ಇನ್ನು, ಸಚಿವ ಬಿ.ಶ್ರೀರಾಮುಲು ಬಾಯಿಗೆ ಬಂದಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರ ಬಗ್ಗೆ ಮಾತನಾಡಿ, ತಾವು ಬಹುದೊಡ್ಡ ಸಾಧನೆ ಮಾಡಿದ ಹಾಗೆ ಬಿಂಬಿಸಿಕೊಳ್ಳುತ್ತಾರೆ. ಶ್ರೀರಾಮುಲು ಅವರು ಸೋತವರು. ಈ ಹಿಂದೆ ಬಳ್ಳಾರಿ ಬಿಟ್ಟು, ಬದಾಮಿ, ಮೊಳಕಾಲ್ಮೂರಿಗೆ ಹೋಗಿದ್ದಾರೆ. ಹೀಗಿರುವಾಗ ಇನ್ನೊಬ್ಬರ ಸೋಲಿನ ಬಗ್ಗೆ ಮಾತನಾಡುವುದು ತಪ್ಪು ಎಂದು ಏಕವಚನದಲ್ಲಿಯೇ ಉಗ್ರಪ್ಪ ಹರಿಹಾಯ್ದರು.