ಮಂಗಳೂರು: ಸಂಗೀತೋತ್ಸವದ ಸಮಾರೋಪ

ಮಂಗಳೂರು: ಸಂಗೀತದ ಅಭಿರುಚಿ ಬೆಳೆಸಿಕೊಂಡವರಿಗೆ ಸಂತೋಷ, ನೆಮ್ಮದಿ ಸಿಗುವುದರಲ್ಲಿ ಸಂಶಯವಿಲ್ಲ. ನಮ್ಮ ಮನಸ್ಸಿನ ಅಗಾಧ ನೋವಿಗೆ ಸಂಗೀತವು ಸಂಜೀವಿನಿಯಂತಿದೆ ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಅಭಿಪ್ರಾಯಪಟ್ಟರು.
ಸಂಗೀತ ಪರಿಷತ್ ಮಂಗಳೂರು ವತಿಯಿಂದ ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಮಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಕಾಲ ಜರಗಿದ ‘ಮಂಗಳೂರು ಸಂಗೀತೋತ್ಸವ’ದ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಗೀತವು ಸಾಗರವಿದ್ದಂತೆ. ಸಾವಿರಾರು ಸಾಧಕರು ಅದರಲ್ಲಿ ಈಜಿ ಪ್ರಗತಿ ಕಂಡಿದ್ದಾರೆ. ಅವರೆಲ್ಲರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ, ಅವರಲ್ಲಿ ಸಂಗೀತದ ಅಭಿರುಚಿ ಮೂಡಿಸಬೇಕು. ಹಾಡುಗಾರರ, ಸಂಗೀತಗಾರರ ಜತೆಗೆ ಕೇಳುಗರೂ ಇದ್ದಾಗ ಸಂಗೀತದ ಪರಿಕಲ್ಪನೆ ಪೂರ್ಣಗೊಳ್ಳುತ್ತದೆ ಎಂದು ಡಾ.ಕುಮಾರ್ ಹೇಳಿದರು.
ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜೀ ಮಹಾರಾಜ್, ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಮಹಾಬಲೇಶ್ವರ ಎಂ.ಎಸ್. ಮಾತನಾಡಿದರು.
ಸಂಗೀತ ಕ್ಷೇತ್ರದ ಸಾಧನೆಗಾಗಿ ವೀಣಾ ವಾದಕಿ ಜಯಲಕ್ಷ್ಮಿ ಭಟ್ ಸಾಣೂರು ಅವರನ್ನು ಸನ್ಮಾನಿಸಲಾಯಿತು. ಉದಯೋನ್ಮುಖ ಕಲಾವಿದರಾದ ಶೋಭಿತಾ ಭಟ್, ಮೇಧಾ ಉಡುಪ ಸುಧೀಕ್ಷಾ ಆರ್., ಆಕಾಶ್ ಕೃಷ್ಣ ಅವರನ್ನು ಗೌರವಿಸಲಾಯಿತು. ಪರಿಷತ್‌ನಿಂದ ಆಯೋಜಿಸಲಾದ ಕಿರಿಯ ಮತ್ತು ಹಿರಿಯರ ವಿಭಾಗದ ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಗೀತ ಪರಿಷತ್ ಉಪಾಧ್ಯಕ್ಷ ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು.