ಭೂಮಿ ಹಕ್ಕು ನೀಡುವಂತೆ ಆಗ್ರಹ: ಶರಾವತಿ ಮುಳುಗಡೆ ಸಂತ್ರಸ್ತರ ಪರ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ
ರಾಜ್ಯ ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ
ಶಿವಮೊಗ್ಗ, ನ.28: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವಂತೆ ಆಗ್ರಹಿಸಿ ಆಯನೂರಿನಿಂದ ಶಿವಮೊಗ್ಗದವರೆಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಾ ಸಮಿತಿ ವತಿಯಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಆಯನೂರಿನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದುವ್ರನಾರಾಯಣ್ ಚಂಡೆ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ,ಹೊಸನಗರ,ತೀರ್ಥಹಳ್ಳಿ,ಸೊರಬ,ಶಿಕಾರಿಪುರ ತಾಲೂಕುಗಳಿಂದ ಸಾವಿರಾರು ಸಂಖ್ಯೆಯ ರೈತರು ಪಾಲ್ಗೊಂಡಿದ್ದರು. ನಾಡಿಗೆ ಬೆಳಕು ಕೊಟ್ಟ ಶರಾವತಿ ಮುಳುಗಡೆ ಸಂತ್ರಸ್ತರನ್ನು ಮತ್ತೆ ಕತ್ತಲಲ್ಲಿ ಕೂರಿಸಿದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಭೂಮಿಯ ಹಕ್ಕನ್ನು ನೀಡಬೇಕು. ಅಲ್ಲದೇ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಾಗೋಡು ಹೆಜ್ಜೆ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ ಶರಾವತಿ ಮುಳುಗಡೆ ರೈತರೊಂದಿಗೆ ಹೆಜ್ಜೆಹಾಕಿದರು. ಕಾಗೋಡು ತಿಮ್ಮಪ್ಪನವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ್,ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಮಾಜಿ ಶಾಸಕರಾದ ಮಧುಬಂಗಾರಪ್ಪ,ಬೇಳೂರು ಗೋಪಾಲಕೃಷ್ಣ,ಕೆ.ಬಿ ಪ್ರಸನ್ನಕುಮಾರ್, ಆರ್,ಪ್ರಸನ್ನ ಕುಮಾರ್,ಪ್ರಮುಖರಾದ ಆರ್|ಎಂ ಮಂಜುನಾಥ ಗೌಡ,ಪುತ್ರಿ ಡಾ.ರಾಜನಂದಿನಿ ಸೇರಿದಂತೆ ಹಲವಾರು ಮುಖಂಡರು ಸಾಥ್ ನೀಡಿದರು.
ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಕಲಗೋಡು ರತ್ನಾಕರ್,ಜಿ.ಡಿ ಮಂಜುನಾಥ್,ಎನ್.ರಮೇಶ್,ದೀಪಕ್ ಸಿಂಗ್ ಸೇರಿದಂತೆ ಮೊದಲಾದವರಿದ್ದರು.
''ಮಲೆನಾಡಿಗರ ಸಮಸ್ಯೆಯನ್ನು ಮುಂದಿಟ್ಟುಕೊಂಡ ಹೋರಾಟ ಆರಂಭಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ರೈತರಿಗೆ ಕೊಟ್ಟ ಭೂಮಿಯನ್ನು ರಾಜ್ಯ ಸರ್ಕಾರ ನೋಟಿಫೈ ಮಾಡಿದೆ.ಆದರೆ, ಇನ್ನೂ,ಕಾಲ ಮಿಂಚಿಲ್ಲ,ಸಂತ್ರಸ್ಥರ ಭೂಮಿಯನ್ನು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು''.
-ಕಾಗೋಡು ತಿಮ್ಮಪ್ಪ,ಮಾಜಿ ಸಚಿವರು
---------------------------------
''ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು ಡಿನೋಟಿಫಿಕೇಷನ್ ಮಾಡಲಾಗಿತ್ತು.ಆದರೆ ಬಿಜೆಪಿ ಸರ್ಕಾರ ಡಿನೋಟಿಫಿಕೇಷನ್ ರದ್ದು ಮಾಡುವ ಮೂಲಕ ಮುಳುಗಡೆ ರೈತರನ್ನು ಬೀದಿ ಪಾಲು ಮಾಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆದು ಭೂಮಿ ಹಂಚಿಕೆ ಮಾಡಬೇಕು''.
-ಮಧುಬಂಗಾರಪ್ಪ. ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು